ಕೂಡಿಗೆ, ಅ. 24: ತಾಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜಕಲ್ಯಾಣ ಇಲಾಖೆ ಮತ್ತು ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಸೋಮವಾರಪೇಟೆ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ರಾಮೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್. ಮಂಜುಳಾ ಮಾತನಾಡಿ, ವಾಲ್ಮೀಕಿಯವರ ಆದರ್ಶ ಗುಣ ಮತ್ತು ಮಾರ್ಗದರ್ಶನ ಇಂದಿನ ಪೀಳಿಗೆಗೆ ಬಹು ಮುಖ್ಯವಾಗಿದೆ. ಅವರ ಉತ್ತಮ ತತ್ವ ಸಿದ್ಧಾಂತಗಳನ್ನು ಅರ್ಥೈಸಿಕೊಂಡು ಮೈಗೊಡಿಸಿಕೊಳ್ಳಬೇಕು ಎಂದರು.
ಮುಖ್ಯ ಭಾಷಣಕಾರರಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಳುವಾರ ಸ್ನಾತ್ತಕೋತ್ತರ ಕೇಂದ್ರದ ಕನ್ನಡ ವಿಭಾಗದ ಉಪನ್ಯಾಸಕ ಜಮೀರ್ ಅಹಮ್ಮದ್ ಮಾತನಾಡಿ, ಭಾರತದ ರಾಷ್ಟ್ರೀಯ ಮಹಾಕವಿ ವಾಲ್ಮೀಕಿ ಮಹರ್ಷಿಯವರು ಕನ್ನಡ ಸಾಹಿತ್ಯದ ಅಧಮ್ಯ ಚೇತನಗಳಲ್ಲೊಬ್ಬರು. ಮಹಾಕವಿಯನ್ನು ಒಂದು ಜಾತಿಗೆ ಸೀಮಿತಿಗೊಳಿಸದೆ, ಸರ್ವರೂ ಕೂಡ ಸ್ತುತಿಸಬೇಕಾಗಿದೆ. ವಾಲ್ಮೀಕಿ ಜಯಂತಿ ಆಚರಣೆ ಮೂಲಕ ಸಮುದಾಯದ ನೆಲೆ ಅಸ್ತಿತ್ವದ ಕುರಿತು ಮನನ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ತಾಲೂಕು ದಂಡಾಧಿಕಾರಿ ಮಹೇಶ್ ಮಾತನಾಡಿ, ಪುರಾಣದಲ್ಲಿನ ಮಹಾನ್ ವ್ಯಕ್ತಿಗಳ ಆದರ್ಶ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಅಲ್ಲದೆ, ಜ್ಞಾನ ಸಂಪಾದನೆಯ ಜೊತೆಗೆ ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್‍ಮಾತನಾಡಿ, ಹಿಂದುಳಿದ ಸಮುದಾಯದಲ್ಲಿ ಜನಿಸಿ ಮಹಾಗ್ರಂಥ ರಾಮಾಯಣ ರಚಿಸಿ ವಿಶ್ವಕ್ಕೆ ಮಾದರಿಯಾಗಿರುವ ಮಹರ್ಷಿ ವಾಲ್ಮೀಕಿಯವರು ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ. ಸುನೀಲ್‍ಕುಮಾರ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಬಾಲಕೃಷ್ಣ ರೈ ಮತ್ತಿತರರು ಇದ್ದರು. ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ವಸತಿ ನಿಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ರವಿ, ಬಾಲಕೃಷ್ಣ ರೈ ಹಾಗೂ ವಿದ್ಯಾರ್ಥಿ ರಶ್ಮಿ ನಿರ್ವಹಿಸಿದರು.