ಸೋಮವಾರಪೇಟೆ, ಅ. 25: ‘ಜಿಲ್ಲೆಗೆ ಸರಬರಾಜಾಗುತ್ತಿರುವ ರಸಗೊಬ್ಬರ, ಕ್ರಿಮಿನಾಶಕಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ಸಂಶಯಗಳಿದ್ದು, ಇವುಗಳನ್ನು ಪರಿಶೀಲನೆ ನಡೆಸಲು ಜಿಲ್ಲೆಯಲ್ಲಿ ಕೆಮಿಕಲ್ ಲ್ಯಾಬ್ ಸ್ಥಾಪಿಸಿ, ಪ್ರಾಕೃತಿಕ ವಿಕೋಪ ಹಿನ್ನೆಲೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಿ’ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಬೆಳೆಗಾರರು ಬೇಡಿಕೆಯನ್ನಿಟ್ಟರು.ತಾಲೂಕು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಳೆಗಾರರು, ಸಂಸದ ಪ್ರತಾಪ್ ಸಿಂಹ ಅವರಲ್ಲಿ ಹಲವಷ್ಟು ಬೇಡಿಕೆಗಳನ್ನು ಮುಂದಿಟ್ಟರು.ರಸಗೊಬ್ಬರ, ಕ್ರಿಮಿನಾಶಕಗಳ ಗುಣಮಟ್ಟದ ಪರೀಕ್ಷೆಗೆ ಜಿಲ್ಲೆಯಲ್ಲಿ ಕೆಮಿಕಲ್ ಲ್ಯಾಬ್ ಸ್ಥಾಪಿಸುವಂತೆ ಈ ಹಿಂದೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ನೀವುಗಳಾದರೂ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಹಲವಷ್ಟು ಕೃಷಿ ನಷ್ಟವಾಗಿದ್ದು, ಹೆಚ್ಚಿನ ಪರಿಹಾರ ಒದಗಿಸಲು ಕೋರಿ ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರನ್ನು ಒಳಗೊಂಡ ನಿಯೋಗವನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಅವರಲ್ಲಿಗೆ ಕರೆದೊಯ್ಯಲಾಗುವದು. ಆ ಸಂದರ್ಭ ಕೆಮಿಕಲ್ ಲ್ಯಾಬ್ ಸ್ಥಾಪನೆ ಬಗ್ಗೆಯೂ ಪ್ರಸ್ತಾಪಿಸಲಾಗುವದು ಎಂದರು.ಭೂಕುಸಿತದಿಂದ ರಸ್ತೆಗಳು ಕೊಚ್ಚಿಕೊಂಡು ಹೋದ ಸ್ಥಳಗಳಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಸ್ಯಾಂಡ್ ಬ್ಯಾಗ್ ಮೂಲಕ ತಡೆಗೋಡೆ ನಿರ್ಮಿಸುವ ಬದಲು, ಅಕ್ಕಪಕ್ಕದ ಜಾಗದ ಮಾಲೀಕರಿಗೆ ಹಣ ನೀಡಿ ಜಾಗವನ್ನು

(ಮೊದಲ ಪುಟದಿಂದ) ಖರೀದಿಸುವ ಮೂಲಕ ನೂತನ ರಸ್ತೆ ನಿರ್ಮಿಸಬಹುದಿತ್ತು. ಈ ಬಗ್ಗೆ ಮುಂದಿನ ದಿನಗಳಲ್ಲಾದರೂ ಚಿಂತನೆ ಹರಿಸುವದೊಳಿತು. ಸ್ಯಾಂಡ್ ಬ್ಯಾಗ್ ತಡೆಗೋಡೆಯಿಂದ ಶಾಶ್ವತ ಪರಿಹಾರ ಕಾಣಲಾಗುವದಿಲ್ಲ ಎಂದು ಮೋಹನ್ ಬೋಪಣ್ಣ ಅಭಿಪ್ರಾಯಿಸಿದರು.

ಕೊಡಗಿನ ಭೂಕುಸಿತಕ್ಕೆ ನಿಖರ ಕಾರಣವನ್ನು ಕಂಡು ಹಿಡಿಯಬೇಕು. ನ್ಯಾಷನಲ್ ಡಿಸಾಸ್ಟರ್ ಯೂನಿಟ್‍ನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಬೆಳೆಗಾರ ದೇವದಾಸ್ ಒತ್ತಾಯಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬೆಳೆಗಾರರು ಸಾಲ ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲ. ಈಗ ಇರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ, ಸಾಲ ಮರುಪಾವತಿಗೆ 5 ವರ್ಷಗಳ ಕಾಲಾವಕಾಶ ಒದಗಿಸಬೇಕು ಎಂದು ಯಡವಾರೆ ಗ್ರಾಮದ ಮಚ್ಚಂಡ ಪ್ರಕಾಶ್ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, 3 ತಿಂಗಳ ಕಾಲ ಬೆಳೆಗಾರರ ಸಾಲವನ್ನು ವಸೂಲಿ ಮಾಡದಂತೆ ಈಗಾಗಲೇ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ ಎಂದರು. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಂದ ಕಾಫಿ ಮತ್ತು ಕರಿಮೆಣಸು ಬೆಳೆ ಹಾನಿಗೀಡಾಗಿದ್ದರೂ, ಕಾಫಿ ಮಂಡಳಿಯವರು ವಾಸ್ತವಿಕತೆಯ ವರದಿ ನೀಡಿಲ್ಲ. ಮತ್ತೊಮ್ಮೆ ಈ ಭಾಗದಲ್ಲಿ ಸರ್ವೆ ನಡೆಸಲು ನಿರ್ದೇಶನ ನೀಡಬೇಕೆಂದು ಹಣಕೋಡು ಗ್ರಾಮದ ಕೃಷ್ಣ ಅವರು ಸಂಸದರಲ್ಲಿ ಮನವಿ ಮಾಡಿದರು.

ಅಬ್ಬೂರುಕಟ್ಟೆ ಸೇರಿದಂತೆ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಡಿಕೆಗಿಂತ ನಾಲ್ಕುಪಟ್ಟು ಹೆಚ್ಚು ಮಳೆ ಸುರಿದಿದೆ. ಫಸಲು ಹಾನಿಗೀಡಾಗಿದೆ. ಇದರೊಂದಿಗೆ ಕಾಡಾನೆಗಳ ಹಾವಳಿಯೂ ಮಿತಿಮೀರಿದೆ. ಇವುಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಆಗ್ರಹಿಸಿದರು.

ಗರಗಂದೂರು ಗ್ರಾಮದ ಲಕ್ಷ್ಮಣ್ ಮಾತನಾಡಿ, ಬೆಟ್ಟಗುಡ್ಡಗಳನ್ನು ಸಮತಟ್ಟುಗೊಳಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇಂತಹ ಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದರು. ಬಿ.ಡಿ. ಮಂಜುನಾಥ್ ಮಾತನಾಡಿ, ಕೆಲವೊಂದು ಬ್ಯಾಂಕ್‍ನಲ್ಲಿ 3,800 ರೂಪಾಯಿ ಬೆಳೆವಿಮೆ ಕಟ್ಟಿಸಿಕೊಂಡು ಇದೀಗ 5,200 ರೂಪಾಯಿ ವಿಮಾ ಪರಿಹಾರ ನೀಡುತ್ತಿದ್ದಾರೆ. ಇದು ಯಾವ ಮಾನದಂಡ ಎಂಬದು ಅರ್ಥವಾಗು ತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿದರು. ಕೊಡಗು ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾವದೇ ನಿಬಂಧನೆಗಳನ್ನು ವಿಧಿಸದೇ ಬೆಳೆಗಾರರ ಆಯ್ದ ಬೆಳೆಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕೆಂದು ಮಂಜುನಾಥ್ ಒತ್ತಾಯಿಸಿದರು.

ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ರೂ. 10 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಮುಂದಾಗಿದೆ. ಬಹುಪಾಲು ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮಾದಾಪುರದಲ್ಲಿರುವ ತೋಟಗಾರಿಕಾ ಇಲಾಖೆಗೆ ಸೇರಿದ 50 ಏಕರೆ ಜಾಗವನ್ನು ವಶಕ್ಕೆ ಪಡೆದು ನಿವೇಶನದೊಂದಿಗೆ ಮನೆ ನಿರ್ಮಿಸಿಕೊಡಲು ಮುಂದಾಗಿದ್ದರೂ, ರಾಜ್ಯ ಸರ್ಕಾರದ ಸಚಿವ ಸಂಪುಟ ಈ ಬಗ್ಗೆ ತೀರ್ಮಾನವನ್ನೇ ಕೈಗೊಂಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.

ರಾಜ್ಯ ಸರ್ಕಾರದಿಂದ ನಿವೇಶನಗಳನ್ನು ಒದಗಿಸಿದರೆ ಜಿಲ್ಲೆಯಲ್ಲಿ ಸುಮಾರು 500 ಮನೆಗಳನ್ನು ತನ್ನ ಸಂಪರ್ಕದಲ್ಲಿರುವ ದಾನಿಗಳಿಂದ ನಿರ್ಮಿಸಿಕೊಡಲು ಸಿದ್ಧನಿದ್ದೇನೆ ಎಂದು ಪ್ರತಾಪ್‍ಸಿಂಹ ಹೇಳಿದರು. ಕೊಡಗಿನ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೂ ಸಾಕಷ್ಟು ಹಣ ಬಂದಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವದೇ ಮಾಹಿತಿ ಒದಗಿಸುತ್ತಿಲ್ಲ ಎಂದು ದೂರಿದರು. ಕೇಂದ್ರ ಸಚಿವರ ಭೇಟಿ ಸಂದರ್ಭ ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುವದು. ನಿಯೋಗ ತೆರಳುವ ದಿನಾಂಕವನ್ನು ಸದ್ಯದಲ್ಲೇ ಅಂತಿಮಗೊಳಿಸ ಲಾಗುವದು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬೆಳೆಗಾರರ ಸಂಘದ ಉಪಾಧ್ಯಕ್ಷ ಬಸಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.