ಕೂಡಿಗೆ, ಅ. 25: ಕೂಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಹುದುಗೂರು ಗ್ರಾಮದ ಸರ್ವೆ ನಂ. 11/1 ರಲ್ಲಿ 4 ಎಕರೆ ಪ್ರದೇಶವನ್ನು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನವನ್ನು ನೀಡಲು ಕಾದಿರಿಸಲಾಗಿದೆ. ಈ ಜಾಗವು ಹಾರಂಗಿ ನದಿಯ ದಡದ ಸಮೀಪದಲ್ಲಿದ್ದು, ತಗ್ಗು ಪ್ರದೇಶವಾಗಿರುವದರಿಂದ ಮಳೆಗಾಲದಲ್ಲಿ ನೀರು ತುಂಬಿ ಹೊಳೆಯಂತಾಗುವ ಪ್ರದೇಶವಾಗಿದೆ.

ಮಳೆಗಾಲದಲ್ಲಿ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ನಂತರ ನದಿಗೆ ನೀರನ್ನು ಹರಿಬಿಟ್ಟಾಗ ಈ ಪ್ರದೇಶದ ಮುಕ್ಕಾಲು ಭಾಗದಷ್ಟು ತುಂಬಿ ಹೋಗುತ್ತದೆ. ಇಂತಹ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಜಾಗವನ್ನು ಗುರುತು ಮಾಡಿರುವದು ಎಷ್ಟರ ಮಟ್ಟಿಗೆ ಸರಿ ಎಂಬದು ಗ್ರಾಮಸ್ಥರ ಪ್ರಶ್ನೆ. ಇದರ ಬಗ್ಗೆ ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡು ನಿವೇಶನ ರಹಿತರಿಗೆ ನಿವೇಶನ ಹಂಚುವಂತೆ ತಾಲೂಕು ಪಂಚಾಯಿತಿಯ ಅನುಮೋದನೆಗೆ ಕಳುಹಿಸಿದ್ದು, ಪಂಚಾಯಿತಿಯಿಂದಲೂ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಅರ್ಜಿಗಳನ್ನು ಸ್ವೀಕರಿಸುವಂತೆ ಆದೇಶ ಬಂದಿದೆ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಬದಲಿ ಪೈಸಾರಿ ಜಾಗವನ್ನು ಗುರುತಿಸಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.