ಮಡಿಕೇರಿ, ಅ.25 : ಪ್ರಕೃತಿ ವಿಕೋಪ ಸಂಭವಿಸಿ 2 ತಿಂಗಳುಗಳೇ ಕಳೆದರೂ ನಿರಾಶ್ರಿತರು ಮತ್ತು ಸಂತ್ರಸ್ತರ ಬಗ್ಗೆ ನಿಖರ ಮಾಹಿತಿ ಕಲೆ ಹಾಕುವಲ್ಲಿ ಗ್ರಾ.ಪಂ ಮಟ್ಟದ ಸರಕಾರಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಕ್ಕಂದೂರು ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಳೆಹಾನಿಯಿಂದ ನಿರಾಶ್ರಿತರಾಗಿರುವ ಅನೇಕರು ಗ್ರಾಮದ ಮನೆಗಳಲ್ಲಿ ವಾಸವಿಲ್ಲದೆ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾರೆ. ಕೆಲವರು ಬಾಡಿಗೆ ಮನೆ ಮಾಡಿಕೊಂಡು ಮಡಿಕೇರಿ ಹಾಗೂ ಇತರೆಡೆಯಲ್ಲಿ ಆಶ್ರಯ ಪಡೆದಿದ್ದಾರೆ. ಇವರುಗಳ ಬಗ್ಗೆ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲವೆಂದು ಟೀಕಿಸಿದರು.

ಇಲ್ಲಿಯವರೆಗೆ ಸರ್ಕಾರದಿಂದ ವಿತರಿಸಿರುವ 3,800 ರೂ. ಗಳ ಚೆಕ್ ಅತಿವೃಷ್ಟಿ ಹಾನಿಗೊಳಗಾದ ಬಹುತೇಕ ಎಲ್ಲಾ ಗ್ರಾಮಗಳಿಗೆ ತಲುಪಿದೆ. ಆದರೆ ಮಕ್ಕಂದೂರು, ಮೇಘತ್ತಾಳು, ಹೆಮ್ಮತ್ತಾಳು ಹಾಗೂ ಮುಕ್ಕೋಡ್ಲು ಗ್ರಾಮದ ಸಂತ್ರಸ್ತರಿಗೆ ಸಮರ್ಪಕ ರೀತಿಯಲ್ಲಿ ಚೆಕ್ ವಿತರಣೆಯಾಗಿಲ್ಲವೆಂದು ಆರೋಪಿಸಿದರು.

ಕೆಲವರಿಗೆ ಒಂದೇ ಮನೆಯಲ್ಲಿ ಗಂಡ, ಹೆಂಡತಿ, ಮಗ, ಮಕ್ಕಳು ಎಂದು 2-3 ಚೆಕ್ ವಿತರಣೆಯಾಗಿದೆ. ಆದರೆ ತೋಟ, ಗದ್ದೆ, ಮನೆ ಕಳೆದುಕೊಂಡ ನೈಜ ಸಂತ್ರಸ್ತರಿಗೆ ಚೆಕ್ ದೊರೆತಿಲ್ಲ. ಹಾಗಾದರೆ ಫಲಾನುಭವಿಗಳ ಆಯ್ಕೆಗೆ ಮಾನದಂಡವೇನು ಎಂದು ರವಿಕಾಳಪ್ಪ ಪ್ರಶ್ನಿಸಿದರು.

ಮನೆ ಕಳೆದುಕೊಂಡ ನೈಜ ಫಲಾನುಭವಿಗಳಿಗೆ ಈಗಾಗಲೇ ಒಂದು ಲಕ್ಷದ ಒಂದು ಸಾವಿರದ ಒಂದು ನೂರು ರೂ. ನೀಡಿರುವದು ಸ್ವಾಗತಾರ್ಹ. ಆದರೆ ಅದೇ ಮನೆಯಲ್ಲಿ ವಾಸವಿರುವವರಿಗೂ ಚೆಕ್ ನೀಡಲಾಗಿದೆ. ತೀವ್ರ ಭಾಗಶಃ ಮನೆ ಹಾನಿ ಎಂದು ಚೆಕ್ಕನ್ನು ನೀಡಲಾಗಿದ್ದು, ಇದನ್ನು ಯಾವ ಆಧಾರದಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರ ಮನೆಗಳಿಗೆ ಏನೂ ಹಾನಿಯಾಗದಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮಗೆ ಇಷ್ಟ ಬಂದಷ್ಟು ಹಣದ ಚೆಕ್ ನೀಡಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಶಂಕೆ ಇದ್ದು, ಸರ್ಕಾರ ತಕ್ಷಣ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರವಿಕಾಳಪ್ಪ ಒತ್ತಾಯಿಸಿದರು.

ಅನೇಕರು ಸಂಪೂರ್ಣ ತೋಟ, ಗದ್ದೆ ಕಳೆದುಕೊಂಡು ಕೇವಲ ವಾಸದ ಮನೆ ಮಾತ್ರ ಉಳಿದುಕೊಂಡಿದೆ. ಕೆಲವರಿಗೆ ಮನೆಯೂ ಇಲ್ಲ, ಈ ಬಗ್ಗೆ ಇಲ್ಲಿಯವರೆಗೆ ಗ್ರಾ.ಪಂ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ನಷ್ಟವಾಗಿರುವ ಕುಟುಂಬಗಳು ಹಾಗೂ ಜಮೀನಿನ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು ಮತ್ತು ಬಹಿರಂಗವಾಗಿ ಗ್ರಾ.ಪಂ ಯಲ್ಲಿ ಪಟ್ಟಿ ಪ್ರಕಟಿಸಬೇಕು ಎಂದು ರವಿಕಾಳಪ್ಪ ಒತ್ತಾಯಿಸಿದರು.

ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ಕುಂಬುಗೌಡನ ಉತ್ತಪ್ಪ ಮಾತನಾಡಿ ಮಕ್ಕಂದೂರು ಭಾಗದ ಸಂತ್ರಸ್ತರು ಭಿಕ್ಷುಕರಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ತನಗೆ ಸೇರಿದ ಎಂಟು ಎಕರೆ ಗದ್ದೆ ಸಂಪೂರ್ಣವಾಗಿ ನಾಶವಾಗಿದ್ದು, ಕೆಸರಿನೊಂದಿಗೆ ಮರಗಳು ಬಂದು ಬಿದ್ದಿದ್ದು, ನಾಟಿ ಮಾಡಲಾಗದ ಪರಿಸ್ಥಿತಿ ಇದೆ. ಆದರೆ ಅಧಿಕಾರಿಗಳು ನಿಖರ ಮಾಹಿತಿಯನ್ನು ಕಲೆ ಹಾಕದೆ ದೂರದಿಂದ ನೋಡಿ ವರದಿ ನೀಡುತ್ತಿದ್ದಾರೆ ಎಂದು ಟೀಕಿಸಿದರು. ನೊಂದ ಸಂತ್ರಸ್ತ ರೈತರ ಸಹಾಯಕ್ಕೆ ಸರಕಾರ ಬಾರದಿದ್ದಲ್ಲಿ ಆತ್ಮಹತ್ಯೆಯಂತಹ ಪ್ರಕರಣಗಳು ಕೊಡಗಿನಲ್ಲೂ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.

ಸಂಕಷ್ಟದಲ್ಲಿರುವ ವಯೋವೃದ್ದರಿಗೆ ವೃದ್ದಾಪ್ಯ ವೇತನ ನೀಡುವಂತೆ ಉತ್ತಪ್ಪ ಒತ್ತಾಯಿಸಿದರು.

ಬೇಡಿಕೆಗಳು

ರೂ.3,800 ನ್ನು ಪ್ರತಿಯೊಬ್ಬ ಸಂತ್ರಸ್ತರಿಗೂ ವಿತರಿಸಬೇಕು, ಮನೆಗಳ ಸಂಪೂರ್ಣ, ತೀವ್ರ, ಭಾಗಶಃ ಹಾನಿಯ ಮರುಪರಿಶೀಲನೆ ನಡೆಸಿ ವಾಸಕ್ಕೆ ಯೋಗ್ಯವಲ್ಲದ ಮನೆಯ ವರಿಗೂ ಪರಿಹಾರ ನೀಡÀಬೇಕು.

ಗದ್ದೆ, ತೋಟ, ಖಾಸಗಿ ರಸ್ತೆಗಳು, ಕೆರೆಗಳು ಕಂದಾಯ ಪಾವತಿಸುವ ಪ್ರತಿ ಲೈನ್ ಮನೆ, ಯಂತ್ರೋಪಕರಣಗಳ ನಷ್ಟದ ಪಟ್ಟಿಯನ್ನು ತಯಾರು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.

ಸರ್ಕಾರದಿಂದ ನಷ್ಟದ ಪಟ್ಟಿಗೆ ತಕ್ಷಣ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ತುರ್ತಾಗಿ ಬೆಳೆ ನಷ್ಟದ ಪರಿಹಾರವನ್ನು ವಿತರಿಸಬೇಕು.

ಪ್ರಕೃತಿ ವಿಕೋಪ ಸಂಭವಿಸಿದ ಗ್ರಾಮಗಳ ರೈತರ ಪೂರ್ಣ ಸಾಲಮನ್ನಾ ಮಾಡಬೇಕು. ಮಳೆಯಿಂದ ಗದ್ದೆ, ತೋಟಗಳಲ್ಲಿ ಶೇಖರಣೆಯಾಗಿರುವ ಮರಗಳನ್ನು ಮಾಲೀಕರಿಗೇ ನೀಡುವಂತಾಗಬೇಕು. ಅಥವಾ ಸರ್ಕಾರ ಶೇಖರಣೆ ಮಾಡಿ ಹರಾಜು ಮಾಡಿದ ನಂತರ ಸಿಗುವ ಮೊತ್ತವನ್ನು ತೋಟ ಕಳೆದುಕೊಂಡವರಿಗೆ ನೀಡಬೇಕು.

ನಷ್ಟಕ್ಕೆ ಒಳಗಾದ ಗ್ರಾಮಸ್ಥರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಹಾನಿಗೊಳಗಾಗಿರುವ ಖಾಸಗಿ ರಸ್ತೆ, ಕೆರೆಗಳು, ಯಂತ್ರೋಪಕರಣಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಅಥವಾ ಸರ್ಕಾರವೇ ದುರಸ್ತಿಪಡಿಸುವ ಯೋಜನೆ ಹಾಕಿಕೊಳ್ಳಬೇಕು.

ಈಗಾಗಲೇ ಹೊಳೆಯಲ್ಲಿ ಮಣ್ಣು ತುಂಬಿ ನೀರು ಮೇಲ್ಮಟ್ಟದಲ್ಲಿ ಹರಿಯುತ್ತಿದ್ದು, ಇದರ ಹೂಳೆತ್ತುವ ಕಾರ್ಯ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ವರ್ಷ ಸಾಧಾರಣ ಮಳೆಗೆ ರಸ್ತೆ, ಗದ್ದೆಗಳು ಜಲಾವೃತವಾಗಲಿದೆ. ಇಲ್ಲಿತನಕ ಸರ್ಕಾರದ ಹಣವನ್ನು ಬೇಕಾಬಿಟ್ಟಿ ಪೋಲು ಮಾಡಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.

ಪ್ರಕೃತಿ ವಿಕೋಪ ಸಂಭವಿಸಿದ ಸುಮಾರು 40 ಗ್ರಾಮಗಳಿಗೆ 1 ಗ್ರಾಮಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಿದಲ್ಲಿ ಕೇವಲ ಒಂದು ವಾರದಲ್ಲಿ ನಷ್ಟದ ಸಂಪೂರ್ಣ ನೈಜ ವರದಿಯನ್ನು ತಯಾರು ಮಾಡಬಹುದಾಗಿದ್ದು, ಇದಕ್ಕೆ ಕ್ರಮ ಕೈಗೊಳ್ಳಬೇಕು.

ಭೂ ದಾಖಲೆಗಳ ಅರ್ಜಿಗಳನ್ನು ಪ್ರಥಮ ಆದ್ಯತೆಯಲ್ಲಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿರುವ ರವಿ ಕಾಳಪ್ಪ, 10 ದಿನಗೊಳಗಾಗಿ ಈ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ಚಿಂತಿಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ವಿ.ಎಸ್. ವಿಜಯ, ಐಮುಡಿಯಂಡ ಚಿಣ್ಣಪ್ಪ, ಸಿ.ಪೊನ್ನಪ್ಪ ಹಾಗೂ ಕುಂಬುಗೌಡನ ಅರವಿಂದ್ ಉಪಸ್ಥಿತರಿದ್ದರು.