ಸಿದ್ದಾಪುರ, ಅ. 25: ಪಾಲಿಬೆಟ್ಟ ಗ್ರಾಮಪಂಚಾಯಿತಿಗೆ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿ ತಂಡವು ಭೇಟಿ ನೀಡಿ ಪರಿಶೀಲಿಸಿ ರಾಜ್ಯ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದುಕೊಂಡು ಅಭಿವೃದ್ಧಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಪಾಲಿಬೆಟ್ಟ ಗ್ರಾ.ಪಂಚಾಯಿತಿಗೆ ಕೇಂದ್ರ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಡಾ.ಪಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ 9 ಮಂದಿ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರ ತಂಡ ಗುರುವಾರದಂದು ಸಂಜೆ ಭೇಟಿ ನೀಡಿತು.

ಇವರನ್ನು ಚಂಡೆ ವಾದ್ಯದೊಂದಿಗೆ ಪಂಚಾಯಿತಿ ಕಚೇರಿಗೆ ಕರೆ ತರಲಾಯಿತು. ತಂಡವು ಕಚೇರಿ ಪರಿಶೀಲಿಸಿದ ನಂತರ ಪಂಚಾಯಿತಿ ಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕುಡಿಯುವ ನೀರಿನ ಘಟಕಗಳನ್ನೊಳಗೊಂಡ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ಚೆಶೈರ್ ಹೋಂನ ಸಭಾಂಗಣಕ್ಕೆ ಭೇಟಿ ನೀಡಿ ಅಲ್ಲಿ ಮಹಿಳೆಯರು ಸ್ವಯಂ ಉದ್ಯೋಗದ ಮುಖಾಂತರ ಮಾಡಿರುವ ತಿಂಡಿ ಪದಾರ್ಥಗಳು ಹಾಗೂ ವಿವಿಧ ವಸ್ತುಗಳನ್ನು ಪರಿಶೀಲಿಸಿತು. ಇದಾದ ಬಳಿಕ ಚೆಶೈರ್ ಹೋಂ ಸಭಾಂಗಣದಲ್ಲಿ ಸಭೆ ನಡೆಸಿ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಓ ಅವರಿಂದ ಮಾಹಿತಿ ಕಲೆ ಹಾಕಿತು. ಸಮಿತಿಯ ಮುಖ್ಯಸ್ಥ ವೇಣುಗೋಪಾಲ್ ‘ಶಕ್ತಿ’ಯೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ ಎಂಬ ಮಾಹಿತಿ ಪಡೆಯಲು ರಾಜ್ಯಕ್ಕೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪಾಲಿಬೆಟ್ಟ ಗ್ರಾಮ ಪಂಚಾಯತಿಗೆ ಭೇಟಿ ನೀಡಿರುವದಾಗಿ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಚೆಶೈರ್ ಹೋಂ ಮಕ್ಕಳ ಆಟದ ಕೊಠಡಿಯನ್ನು ವೇಣುಗೋಪಾಲ್ ಉದ್ಘಾಟಿಸಿದರು.

ನಂತರ ನಡೆದ ಸಭೆಯಲ್ಲಿ, ಪ್ರಾಸ್ತಾವಿಕವಾಗಿ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ ಮಾತನಾಡಿ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಸಹಕಾರದಿಂದ ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಲಭಿಸಿದೆ. ಪಂಚಾಯಿತಿ ಶೇ. 98.6 ರಷ್ಟು ತೆರಿಗೆ ವಸೂಲಾತಿ ಮಾಡುವ ಮೂಲಕ ಪ್ರಗತಿಯತ್ತ ದಾಪುಗಾಲು ಇಡುತ್ತಿದೆ ಎಂದರು. ಸಭೆಯಲ್ಲಿ ಹಿಂದಿನ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಸಂಸದರ ವಿವಿಧ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. ಪಿಡಿಓ ಅಬ್ದುಲ್ಲಾ ಪಂಚಾಯಿತಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪರದೆಯ ಮೂಲಕ ಪ್ರದರ್ಶಿಸಿದರು. ಸಭೆಯಲ್ಲಿ ಸಂಸದರುಗಳಾದ ಕೀರ್ತಿ ಅಜಾದ್, ಹರಿಶ್ಚಂದ್ರ ಚೌಹ್ಹಾಣ್, ಜುಗುಲ್ ಕಿಶೋರ್ ಶರ್ಮ, ಶಾಂತರಾಮ್ ಛೆಟ್ರಿ, ಎ.ಕೆ ಚೆಲುವರಾಜ್, ಲಾಲೂ ಸಿಂಗ್ ವಡೋಡಿಯ, ಮೌಸನ್ ನೂರ್, ನಾರಾಯಣ್ ಲಾಲ್ ಪಂಜರಿಯ, ಸಂಸೇರ್ ಸಿಂಗ್ ಡೋಲಾರ್ ಭಾಗವಹಿಸಿದರು. ಅಲ್ಲದೆ ರಾಜ್ಯದ ವಿವಿಧ ಅಧಿಕಾರಿಗಳು ,ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಚೆಶೈರ್ ಹೋಂ ಮುಖ್ಯಸ್ಥೆ ಗೀತಾ ಚಂಗಪ್ಪ ಹಾಜರಿದ್ದರು. ಮಡಿಕೇರಿಯ ಡಿವೈಎಸ್ ಪಿ ಸುಂದರ್ ರಾಜ್ ಹಾಗೂ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

-ಚಿತ್ರ, ವರದಿ : ವಾಸು ಎ.ಎನ್, ಸುಧಿ, ಕೆ.ಕೆ.ಎಸ್.