ಮಡಿಕೇರಿ, ಅ. 24: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಡಿಯಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು 1993ರಿಂದ ಪ್ರತಿ ವರ್ಷ ದೇಶಾದ್ಯಂತ ಜರುಗುತ್ತಿರುವ ಶೈಕ್ಷಣಿಕವಾಗಿ ಮಹತ್ವ ಪೂರ್ಣ ವಾಗಿರುವ ಕಾರ್ಯಕ್ರಮವಾಗಿದೆ.

ಆ ದಿಸೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಪ್ರಸ್ತುತ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಕಾರ್ಯಕ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಾದ್ಯಂತ ಸಂಘಟಿಸುತ್ತಿದೆ ಎಂದು ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ತಿಳಿಸಿದರು.

ಈ ಸಮಾವೇಶದಲ್ಲಿ 10 ರಿಂದ 17 ವರ್ಷ ವಯೋಮಾನದ ಯಾವದೇ ಮಾಧ್ಯಮದಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಒಂದು ತಂಡದಲ್ಲಿ ಭಾಗವಹಿಸಬಹುದಾಗಿದೆ. ಸಮಾವೇಶದಲ್ಲಿ ಶಾಲೆ ಬಿಟ್ಟ ಮಕ್ಕಳು ಕೂಡ ಭಾಗವಹಿಸಲು ಅವಕಾಶವಿದ್ದು, ಸಮಾವೇಶವು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದ 3 ಹಂತಗಳಲ್ಲಿ ಜರುಗುತ್ತದೆ. ಕಿರಿಯರ ತಂಡದಲ್ಲಿ 10-14 ವಯೋಮಾನದ ಮಕ್ಕಳು ಹಾಗೂ ಹಿರಿಯರ ತಂಡದಲ್ಲಿ 14 ರಿಂದ 17 ವಯೋಮಾನದ ಮಕ್ಕಳು ಭಾಗವಹಿಸಬಹುದಾಗಿದೆ. ಭವಿಷ್ಯದ ಬಾಲ ವಿಜ್ಞಾನಿಗಳನ್ನು ರೂಪಿಸಲು ಈ ಸಮಾವೇಶ ಸೂಕ್ತ ವೇದಿಕೆಯಾಗಿದೆ. ಈ ಬಾರಿಯ ಸಮಾವೇಶದಲ್ಲಿ ವಿದ್ಯಾರ್ಥಿಗಳು `ಸ್ವಚ್ಛ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಶಿಕ್ಷಕರ ಮಾರ್ಗದರ್ಶನದೊಂದಿಗೆ ವೈಜ್ಞಾನಿಕವಾಗಿ ಅಧ್ಯಯನವನ್ನು ಕೈಗೊಳ್ಳಬೇಕಿರುತ್ತದೆ. ಸ್ಥಳೀಯ ಸಮಸ್ಯೆಯೊಂದನ್ನು ಆಯ್ದು ಅಧ್ಯಯನ ಹಾಗೂ ವಿಶ್ಲೇಷಣೆಯ ನಂತರ ಸ್ವತ: ತಾವೇ ಸಿದ್ಧಪಡಿಸುವ ವೈಜ್ಞಾನಿಕ ಯೋಜನಾ ವರದಿಯನ್ನು ಮಂಡಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳ ಅನ್ವೇಷಣೆ, ಕುತೂಹಲಪೂರಿತ ಅಧ್ಯಯನ ಸ್ವಭಾವಕ್ಕೆ ಹಾಗೂ ಭೌದ್ಧಿಕ ಅಭಿವೃದ್ಧಿಯ ಸಮಗ್ರ ಬೆಳವಣಿಗೆಗೆ ಅವಕಾಶ ದೊರೆಯುತ್ತದೆ.

ಪ್ರಸ್ತುತ 2018ನೇ ಸಾಲಿನಲ್ಲಿ ಜರುಗುತ್ತಿರುವ ಈ ಸಮಾವೇಶದಲ್ಲಿ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಭಾಗವಹಿಸಲು ವಿಜ್ಞಾನ ಪರಿಷತ್ತು ಕರೆ ನೀಡುತ್ತಿದೆ.

ಕಾರ್ಯಕ್ರಮದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನವೆಂಬರ್ ಮಧ್ಯಂತರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ, ಡಿಸೆಂಬರ್ ಮೊದಲ ವಾರದಲ್ಲಿ 3 ದಿನ ಅವಧಿಯ ರಾಜ್ಯ ಮಟ್ಟದ ಸಮಾವೇಶ, ನಂತರ ಡಿಸೆಂಬರ್ 27 ರಿಂದ 31 ರವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ರಾಷ್ಟ್ರ ಮಟ್ಟದ ಸಮಾವೇಶ ಆಯೋಜನೆಗೊಳ್ಳಲಿದೆ.

ರಾಜ್ಯದ 30 ಜಿಲ್ಲೆಗಳಿಂದ ಗ್ರಾಮೀಣ ಮತ್ತು ನಗರ ವಿಭಾಗದಡಿಯಲ್ಲಿ ಅತ್ಯುತ್ತಮ ಪ್ರಬಂಧಗಳನ್ನು ಮಂಡಿಸುವ 10 ತಂಡಗಳು ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಆಯ್ಕೆಗೊಳ್ಳಲಿವೆ. ಅದರಂತೆ, ರಾಜ್ಯಮಟ್ಟದ ಸಮಾವೇಶದಲ್ಲಿ ಅತ್ಯುತ್ತಮ ಪ್ರಬಂಧಗಳ ಮಂಡನೆ ಮಾಡುವ 30 ತಂಡಗಳು ರಾಷ್ಟ್ರಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಆಯ್ಕೆಗೊಳ್ಳಲಿವೆ.

ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗಾಗಿ ಭಾಗವಹಿಸಲು ಅನುಕೂಲವಾಗುವಂತೆ ಮಾರ್ಗದರ್ಶಿ ಚಟುವಟಿಕೆಗಳ ಸಂಪನ್ಮೂಲ ಕೈಪಿಡಿ ಲಭ್ಯವಿದ್ದು, ವಾಟ್ಸಾಪ್ ನಂ. 9008442557 ಸಂಪರ್ಕಿಸಿ ಮಾಹಿತಿ ಮತ್ತು ಕೈಪಿಡಿ ಪಡೆಯಬಹುದಾಗಿದೆ ಅಥವಾ ವೆಬ್‍ಸೈಟ್ : ತಿತಿತಿ.ಞಡಿvಠಿ.oಡಿg ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.