ಸೋಮವಾರಪೇಟೆ, ಅ. 24: ಇಲ್ಲಿನ ರೋಟರಿ ಸೋಮವಾರಪೇಟೆ ಹಿಲ್ಸ್‍ನ 20ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ಕುಟುಂಬಸ್ಥರಿಗೆ ಕ್ರೀಡಾಕೂಟ ವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಪಿ.ಕೆ.ರವಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಎರಡು ದಶಕಗಳ ಹಿಂದೆ ಅ. 30 ರಂದು ಪಟ್ಟಣದಲ್ಲಿ ರೋಟರಿ ಸಂಸ್ಥೆ ಸ್ಥಾಪನೆಯಾಗಿದ್ದು, 20ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ರೋಟರಿ ಸದಸ್ಯರು ಹಾಗೂ ಕುಟುಂಬಸ್ಥರಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ನಂತರ ಸದಸ್ಯರಿಗೆ ನಿಧಾನಗತಿ ಯಲ್ಲಿ ಬೈಕ್ ಚಾಲಿಸುವ ಸ್ಪರ್ಧೆ, ವಿಕೆಟ್‍ಗೆ ಬೌಲಿಂಗ್ ಮಾಡುವದು, ಪಾಸಿಂಗ್ ದಿ ಬಾಲ್, ಹಾಕಿಯಿಂದ ಬಾಲ್ ತಳ್ಳುವದು ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ತಾ. 30 ರಂದು ಜರುಗುವ ಸಂಸ್ಥಾ ಪನಾ ದಿನಾಚರಣೆಯಂದು ಬಹುಮಾನ ವಿತರಿಸಲಾಗುವದು ಎಂದು ಪಿ.ಕೆ. ರವಿ ಹೇಳಿದರು.
ಸಂಸ್ಥಾಪನಾ ದಿನಾಚರಣೆಯ ನೆನಪಿಗಾಗಿ ಪಟ್ಟಣದ ಹೃದಯ ಭಾಗದಲ್ಲಿ ಗಡಿಯಾರ ಕಂಬವನ್ನು ಅಳವಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಖಾಸಗಿ ಬಸ್‍ನಿಲ್ದಾಣ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಸಮೀಪ ಅಳವಡಿಸಲಾಗುವದು. ಜನರಲ್ಲಿ ಸಮಯಪ್ರಜ್ಞೆ ಮೂಡಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕ್ರೀಡಾಕೂಟದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಪಿ.ನಾಗೇಶ್, ಖಜಾಂಚಿ ಬಿ.ಎಂ. ದಿನೇಶ್, ಸ್ಥಾಪಕ ಅಧ್ಯಕ್ಷ ಎಚ್.ಸಿ. ನಾಗೇಶ್, ಮಾಜಿ ಸಹಾಯಕ ರಾಜ್ಯಪಾಲರಾದ ಬಿ.ಎಸ್. ಸದಾನಂದ್, ಎ.ಡಿ. ಶುಭಕರ್, ಪದಾಧಿಕಾರಿಗಳಾದ ಬಿ.ಎಸ್. ಸುಂದರ್, ಎ.ಪಿ. ವೀರರಾಜು ಇದ್ದರು. ಕ್ರೀಡಾಕೂಟವನ್ನು ಎಸ್.ಬಿ. ಯಶವಂತ್ ಮತ್ತು ಶೋಭಾ ಯಶವಂತ್ ನಡೆಸಿಕೊಟ್ಟರು.