ವೀರಾಜಪೇಟೆ, ಅ. 24: ಕೌಟುಂಬಿಕ ಕಲಹದ ಹಿನ್ನೆಲೆ ಗೃಹಿಣಿ ಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುತ್ತುಲಕ್ಷ್ಮಿ (30) ತಮಿಳುನಾಡುವಿನ ಕರೂರು ಜಿಲ್ಲೆಯ ಆನಂದಪುರ ನಿವಾಸಿ ರಂಜಿತ್ ಅವರ ಪತ್ನಿ ಮೃತ ದುರ್ದೈವಿಯಾಗಿದ್ದಾರೆ.

ರಂಜಿತ್ ಕಬ್ಬಿನಕಾಡುವಿನ ರೆಸಾರ್ಟ್‍ನಲ್ಲಿ ವ್ಯವಸ್ಥಾಪರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆ ದಿನ ರಂಜಿತ್ ಎಂದಿನಂತೆ ಕೆಲಸಕ್ಕೆ ತೆರಳಿದ ನಂತರ ಮುತ್ತುಲಕ್ಷ್ಮಿ ವೇಲ್‍ನಿಂದ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡು ಮೂಲದ ಡಿಂಡಿಗಲ್ ಸುಕ್ಕಂಪಟ್ಟಿಯ ಮುತ್ತುಲಕ್ಷ್ಮಿಗೆ ಮೊದಲೇ ಮದುವೆಯಾಗಿದ್ದು, ಒಂದು ಗಂಡು ಮಗು ಇದೆ. ನಂತರ ಈಕೆ ರಂಜಿತ್‍ನೊಂದಿಗೆ ಪ್ರೇಮ ವಿವಾಹವಾಗಿದ್ದು ವೀರಾಜಪೇಟೆಯ ಕೊಡವ ಸಮಾಜದ ಹಿಂಭಾಗದ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದರು.

ಮುತ್ತುಲಕ್ಷ್ಮಿಗೆ ಯಾರೋ ಸಂಬಂಧಿಕರು ಮಾಟ ಮಾಡಿಸಿದ್ದಾರೆ ಎಂದು ಕೆಲವು ದಿನಗಳಿಂದ ಮೂಡ ನಂಬಿಕೆಗೆ ಒಳಗಾಗಿ ಖಿನ್ನತೆಯಿಂದ ಕೂಡಿದ್ದರು. ಗಂಡ ಸ್ವಲ್ಪ ದಿನ ತಂದೆ ಮನೆಗೆ ಹೋಗಿ ಬಾ ಎಂದು ಹೇಳಿದರೂ ಕೇಳುತ್ತಿರಲಿಲ್ಲ ಎಂದು ಮೃತಳ ತಂದೆ ಮುರುಗನ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.