ಮಡಿಕೇರಿ, ಅ.25 : ಜಾತಿ, ಮತ, ಧರ್ಮವನ್ನು ಮರೆತು ನೆರೆಸಂತ್ರಸ್ತರಿಗೆ ಉಳ್ಳವರು ಸೂಕ್ತ ರೀತಿಯಲ್ಲಿ ಸಹಾಯ ಮಾಡುವದೇ ಜನಾರ್ಧನ ಸೇವೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಪಾದಂಗಳು ಹೇಳಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಉಂಟಾಗಿರುವ ಭೂಕುಸಿತವನ್ನು ವೀಕ್ಷಿಸಿದ ಶ್ರೀಗಳು, ಈ ಸಂದರ್ಭ ಮಾತನಾಡಿ, ಜನಾರ್ಧನ ಸೇವೆ ಎಂದರೆ ಕೇವಲ ಭಕ್ತಿ ಮಾರ್ಗವಾದ ದೇವರ ಪೂಜೆ, ಭಜನೆ, ಅಭಿಷೇಕ, ರಥೋತ್ಸವ, ಪಲ್ಲಕಿ ಉತ್ಸವಗಳಲ್ಲ. ನಮ್ಮಲ್ಲಿರುವ ಶೇ. 1 ಭಾಗದ ಸಂಪತ್ತನ್ನಾದರೂ ಸಂತ್ರಸ್ತರಿಗೆ ನೀಡಿ ನೆರವಿಗೆ ಮುಂದಾಗುವದೇ ದೇವರ ಸೇವೆಯಾಗುತ್ತದೆ ಎಂದು ಹೇಳಿದರು. ಸಂಕಷ್ಟ ಕಾಲದಲ್ಲಿ ಸಂತ್ರಸ್ತರ ನೆರವಿಗೆ ಎಲ್ಲರೂ ಧಾವಿಸುವಂತೆಯೂ ಸ್ವಾಮೀಜಿಗಳು ಕರೆ ನೀಡಿದರು.

ಕೊಡಗು ಜಿಲ್ಲೆಯ ಸಂತ್ರಸ್ತರಿಗಾಗಿ 10 ಲಕ್ಷ ರೂ.ಗಳು, ಕೇರಳ ರಾಜ್ಯದ ಸಂತ್ರಸ್ತರಿಗಾಗಿ 10 ಲಕ್ಷ ರೂ.ಗಳನ್ನು ಪೇಜಾವರ ಶ್ರೀಗಳ ಟ್ರಸ್ಟ್‍ನಿಂದ ನೀಡುವದಾಗಿಯೂ ಪೇಜಾವರ ಶ್ರೀಗಳು ಪ್ರಕಟಿಸಿದರು.ತಾವು ಕೇರಳಕ್ಕೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ಸಂತ್ರಸ್ತರಲ್ಲಿ 60 ಮಂದಿಗೆ ನೆರವು ನೀಡಿದ್ದಾಗಿ ಹೇಳಿದ ಪೇಜಾವರ ಶ್ರೀಗಳು, ಕೊಡಗಿಗೂ ನೆರವನ್ನು ಉಡುಪಿಯ ಪರ್ಯಾಯ ಶ್ರೀ ಪಾಲಿಮಾರು ಶ್ರೀಗಳೊಂದಿಗೆ ಚರ್ಚಿಸಿ ನೀಡುವದಾಗಿ ಹೇಳಿದರು.

(ಮೊದಲ ಪುಟದಿಂದ) ಕೊಡಗಿನಲ್ಲಿ ಉಂಟಾಗಿ ರುವ ಸಮಸ್ಯೆಗಳ ಬಗ್ಗೆ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಶ್ರೀಗಳಿಗೆ ಮಾಹಿತಿ ನೀಡಿದರು.

ಮಕ್ಕಂದೂರು, ಉದಯಗಿರಿ ಮತ್ತು ಮದೆನಾಡು ಗ್ರಾಮಗಳಲ್ಲಿನ ಭೂಕುಸಿತ ಪ್ರದೇಶಗಳಿಗೆ ಸ್ವಾಮೀಜಿ ಭೇಟಿ ನೀಡಿ ಅನಾಹುತಗಳನ್ನು ವೀಕ್ಷಿಸಿ ಮಮ್ಮಲ ಮರುಗಿದರು. ಸ್ಥಳದಲ್ಲಿದ್ದ ಸಂತ್ರಸ್ತರಿಗೆ ಸಾಂತ್ವನವನ್ನೂ ಹೇಳಿದ ಸ್ವಾಮೀಜಿ ಧೈರ್ಯ ಕಳೆದುಕೊಳ್ಳದಂತೆಯೂ ಸಲಹೆ ನೀಡಿದರು.

ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್, ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್, ಮಾಜಿ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಹಾಜರಿದ್ದರು.