ಸೋಮವಾರಪೇಟೆ, ಅ. 24: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆ ತಾ. 28ರಂದು ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಭರಾಟೆಯನ್ನು ತೀವ್ರಗೊಳಿಸಿದ್ದಾರೆ. ಪ್ರತಿನಿತ್ಯ ಮತದಾರರ ಮನವೊಲಿಸಲು ಹಲವು ಕಸರತ್ತು ನಡೆಸುತ್ತಿರುವ ಅಭ್ಯರ್ಥಿಗಳು ಮತದಾರರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ.
ಪ.ಪಂ. ಆಡಳಿತವನ್ನು ಕಮಲದ ಕರದಿಂದ ಕಸಿಯಲೇಬೇಕೆಂಬ ಹಠದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮೂಲಕ ಅಖಾಡದಲ್ಲಿ ಸದ್ದು ಮಾಡುತ್ತಿದ್ದು, ಅಧಿಕಾರವನ್ನು ಉಳಿಸಿಕೊಳ್ಳಲೇ ಬೇಕೆಂದು ಬಿಜೆಪಿ ಕಸರತ್ತು ನಡೆಸುತ್ತಿದೆ.
ಬಿಜೆಪಿ ಪರ ಶಾಸಕರುಗಳಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೂ ಸಹ ರಂಗ ಪ್ರವೇಶ ಮಾಡಲು ಸಜ್ಜಾಗಿದ್ದು, ಸ್ಥಳೀಯ ಮಟ್ಟದ ನಾಯಕರು ಅಭ್ಯರ್ಥಿಗಳ ಪರ ಈಗಾಗಲೇ ಪ್ರಚಾರಕ್ಕೆ ಇಳಿದಿದ್ದಾರೆ. ಮತದಾನದ ಅಂತಿಮ ಕ್ಷಣದಲ್ಲಿ ಪ್ರಭಾವಿ ನಾಯಕರು ಮತಯಾಚನೆ ಮಾಡಲಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ 6 ಹಾಗೂ ಜೆಡಿಎಸ್ 5 ವಾರ್ಡ್ಗಳಲ್ಲಿ ಸ್ಪರ್ಧಿಸುತ್ತಿದ್ದು, ಎಲ್ಲಾ 11 ವಾರ್ಡ್ಗಳಲ್ಲೂ ಬಿಜೆಪಿ ಹುರಿಯಾಳುಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಅಧಿಕಾರದ ಗದ್ದುಗೆ ಏರಿದ ಮೂವರು ಮಾಜೀ ಅಧ್ಯಕ್ಷರುಗಳು ಈ ಬಾರಿ ಚುನಾವಣೆ ಎದುರಿಸುತ್ತಿರುವದು ವಿಶೇಷ. ಎನ್.ಎಸ್. ಮೂರ್ತಿ, ನಳಿನಿ ಗಣೇಶ್, ವಿಜಯಲಕ್ಷ್ಮೀ ಸುರೇಶ್ ಇವರಲ್ಲಿ ಪ್ರಮುಖರು.
ಇದರೊಂದಿಗೆ ಮಾಜೀ ಉಪಾಧ್ಯಕ್ಷೆ ಶೀಲಾ ಡಿಸೋಜ, ಮಾಜೀ ಸದಸ್ಯರುಗಳಾದ ಸಂಜೀವ, ಬಿ.ಸಿ. ವೆಂಕಟೇಶ್, ಬಿ.ಎಂ. ಸುರೇಶ್, ದಾಕ್ಷಾಯಿಣಿ, ಜಯಂತಿ ಶಿವಕುಮಾರ್, ಕೆ.ಎ. ಆದಂ ಅವರುಗಳಿಗೂ ಈ ಚುನಾವಣೆ ಪ್ರತಿಷ್ಠೆಯಾಗಿದೆ.
ನಾಲ್ವರು ಪಕ್ಷೇತರರೂ ಸೇರಿದಂತೆ 16 ಹೊಸ ಮುಖಗಳು ಸ್ಪರ್ಧಾ ಕಣದಲ್ಲಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
- ವಿಜಯ್