ಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗುತ್ತಿರುವ ಮಕ್ಕಂದೂರಿನಲ್ಲಿ ಇಂದು ಸ್ವಲ್ಪಮಟ್ಟಿಗೆ ಸೂತಕದ ಛಾಯೆ ಮರೆಯಾಗಿ ಜ್ಞಾನಜ್ಯೋತಿ ಬೆಳಗಿತು. ಜಾನಪದ ಗೀತೆಗಳೊಂದಿಗೆ ಕೊಡಗಿನ ದುಡಿಪಾಟ್ ಕೇಳುವಂತಾಯಿತು. ಈ ನಾಡಿನ ಕಲೆಗಳಾದ ಬೊಳಕಾಟ್, ಕೋಲಾಟ್, ಕತ್ತಿಯಾಟ್, ಚಾಲಿಯಾಟ್ ಗೋಚರಿಸಿತು.

ಪುರುಷರು, ಮಹಿಳೆಯರು, ಯುವಕ - ಯುವತಿಯರು, ಹಿರಿಯರು ಮಕ್ಕಳು ಕಲೆತು ಬೆರೆತು ಉಭಯಕುಶಲೋಪರಿ ಹಂಚಿಕೊಂಡರು. ‘ಇಡೀ ದೇಶ ಕೊಂಡಾಡುವ ಯೋಧರ ನಾಡು ಕೊಡಗಿನಲ್ಲಿ ನೈಸರ್ಗಿಕ ಸಂಪತ್ತು ಹಾನಿಯೊಂದಿಗೆ ಪ್ರಾಕೃತಿಕ ವಿಕೋಪ ಎದುರಾದಾಗ ಯಾರಿಂದಲೂ ತಡೆಯಲು ಅಸಾಧ್ಯವಾಯಿತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉದ್ಗರಿಸಿದರು.

ಮಕ್ಕಂದೂರು, ಮುಕ್ಕೋಡ್ಲು, ತಂತಿಪಾಲ, ಹೆಮ್ಮೆತ್ತಾಳು, ಉದಯಗಿರಿ ವ್ಯಾಪ್ತಿಯ ಅಪಾರ ನಷ್ಟಕ್ಕೆ ಸೂಕ್ತ ನೆರವು ದೊರಕಿಸಬೇಕಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ನೆನಪಿಸಿದರು. ಸಾಗರದಾಚೆಯಲ್ಲಿ ನೆಲೆಸಿರುವ ಕರುನಾಡಿನ ಅಮೇರಿಕಾ ‘ಅಕ್ಕ’ ಬಳಗ ಆಯೋಜಿಸಿದ್ದ ಶಾಲಾ ಕಟ್ಟಡ ಭೂಮಿಪೂಜೆ ಸಮಾರಂಭ ಒಂದು ರೀತಿ ಸಂತ್ರಸ್ತರಲ್ಲಿ ಹೊಸ ಭರವಸೆ ಮೂಡಿಸಿದ ಕ್ಷಣ ಇದಾಗಿತ್ತು. ಮುಕ್ಕೋಡ್ಲು ಕಲಾತಂಡ ನೋವು ಮರೆತು ನಲಿಯುವದರೊಂದಿಗೆ ಜನಪದ ಕಲೆ ಪ್ರದರ್ಶಿಸಿತು. ಅನೇಕರ ಬಾಡಿದ ಮೊಗಗಳಲ್ಲಿ ಅರೆಕ್ಷಣ ನಗುವಿನ ಅಲೆ ಹೊರಸೂಸಿದ ಅನುಭವವಾಯಿತು.

-ಶ್ರೀಸುತ