ಮಡಿಕೇರಿ, ಅ. 26: ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುವ ವಿವಿಧ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದ ಗಮನ ಸೆಳೆÉಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿಯ ನೌಕರರ 7ನೇ ರಾಜ್ಯ ಸಮ್ಮೇಳನ ತಾ. 27, 28 ಮತ್ತು 29 ರಂದು ಮೈಸೂರಿನಲ್ಲಿ ನಡೆಯಲಿದೆ.

ಸಿಐಟಿಯು ಸಂಯೋಜಿತ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಈ ಬಗ್ಗೆ ಮಾಹಿತಿ ನೀಡಿ, ಸಮ್ಮೇಳನದ ಆರಂಭಿಕ ದಿನವಾದ ಅ.27 ರಂದು ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ತಾಲೂಕುಗಳ ಪದಾಧಿಕಾರಿಗಳು ಮತ್ತು ನೌಕರರನ್ನು ಒಳಗೊಂಡ ರ್ಯಾಲಿ ನಡೆಯಲಿದ್ದು, ತಾ. 28 ರಂದು ವಿಚಾರ ಸಂಕಿರಣ ಮತ್ತು ತಾ. 29 ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯ ಸಮ್ಮೇಳನದ ಬಳಿಕ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಡೆದ ನಿರಂತರ ಹೋರಾಟಗಳ ಪರಿಣಾಮ ಪಂಚಾಯಿತಿ ನೌಕರರ ಕನಿಷ್ಟ ವೇತನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಗಣಕಯಂತ್ರ ಸಹಾಯಕರಿಗೆ, ಕರವಸೂಲಿಗಾರರು ಹಾಗೂ ಗುಮಾಸ್ತರಿಗೆ ಹಿಂದೆ 4 ಸಾವಿರ ರೂ. ವೇತನವಿತ್ತಾದರೆ, ಇದೀಗ 13,203 ರೂ., ವಾಟರ್‍ಮ್ಯಾನ್‍ಗೆ ಹಿಂದೆ 2 ಸಾವಿರ ರೂ. ಇದ್ದುದು, ಇದೀಗ 11,669 ರೂ., ಜವಾನರಿಗೆ 11,091 , ಸ್ವಚ್ಛತಾ ಸಿಬ್ಬಂದಿಗಳಿಗೆ 13,951 ಕನಿಷ್ಟ ವೇತನ ನಿಗದಿಯಾಗಿದೆ. ಹೀಗಿದ್ದೂ ಈಗಿನ ಪರಿಸ್ಥಿತಿಯಲ್ಲಿ ನೌಕರರ ಕನಿಷ್ಟ ವೇತನವನ್ನು 18 ಸಾವಿರ ರೂ.ಗಳಿಗೆ ನಿಗದಿಪಡಿಸಬೇಕೆಂಬದು ನಮ್ಮ ಬೇಡಿಕೆಯಾಗಿದೆಯೆಂದು ತಿಳಿಸಿದರು.

ಈ ಹಿಂದೆ ಗ್ರಾಮ ಪಂಚಾಯಿತಿ ನೌಕರರಿಗೆ ಪಂಚಾಯಿತಿಗಳ ಮುಖೇನ, ಅವು ಸಂಗ್ರಹಿಸುವ ತೆರಿಗೆಯನ್ನು ಆಧರಿಸಿ ವೇತನವನ್ನು ನೀಡಲಾಗುತ್ತಿತ್ತು. ಇದರಿಂದ ಸಮರ್ಪಕವಾಗಿ ವೇತನ ಪಾವತಿಯಾಗುತ್ತಿರಲಿಲ್ಲ. ಆದರೆ, ಸಂಘದ ನಿರಂತರ ಹೋರಾಟಗಳ ಫಲಶ್ರುತಿಯಾಗಿ ರಾಜ್ಯವ್ಯಾಪಿ ಇರುವ 6125 ಗ್ರಾಮ ಪಂಚಾಯಿತಿಗಳ 43,823 ನೌಕರರ ವೇತನವನ್ನು ಸರ್ಕಾರ ನೀಡಲು ಸಮ್ಮತಿ ಸೂಚಿಸಿತ್ತು. ಉಳಿದ ಅಂದಾಜು 18 ಸಾವಿರ ಮಂದಿಗೂ ಸರಕಾರ ವೇತನವನ್ನು ನೀಡಬೇಕೆಂದು ಸಂಘ ಬೇಡಿಕೆಯನ್ನು ಮುಂದಿಟ್ಟಿದೆ. ಹೀಗಿದ್ದೂ ಕೆಲವೊಂದು ತಾಂತ್ರಿಕ ಕಾರಣಗಳಿಂದ ವೇತನ ಪಾವತಿ ಸಮರ್ಪಕವಾಗ ಬೇಕಿದೆಯೆಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದ ಸಿಬ್ಬಂದಿಗಳಿಗೆ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಬೇಕೆಂದು ಸಂಘಟನೆ ಒತ್ತಾಯಿಸುತ್ತಾ ಬಂದಿದ್ದರು, ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇಂದಿಗೂ ಹಲವು ಪಂಚಾಯಿತಿಗಳಲ್ಲಿ ಹಲವಾರು ವರ್ಷಗಳಿಂದ ಕರವಸೂಲಿ ಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿದ್ದು, ಅವರಲ್ಲಿ ಕೆಲವಷ್ಟು ಮಂದಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಹೀಗಿದ್ದೂ ಅವರಿಗೆ ಕಾರ್ಯದರ್ಶಿಯ ಸ್ಥಾನಕ್ಕೆ ಭಡ್ತಿ ನೀಡಿಲ್ಲವೆಂದು ಭರತ್ ಬೆÉೀಸರ ವ್ಯಕ್ತಪಡಿಸಿದರು.

ಬೇಡಿಕೆಗಳು: ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಮುಖ ಬೇಡಿಕೆಗಳೆಂದರೆ, ಎಲ್ಲಾ ನೌಕರರಿಗೆ ಇಎಫ್‍ಎಸ್ ಮೂಲಕ ವೇತನ ಜಾರಿಗೊಳಿಸಬೇಕು, ಎಸ್‍ಎಸ್‍ಎಲ್‍ಸಿ ತೇರ್ಗಡೆಯಾದವರಿಗೆ ಕಾರ್ಯದರ್ಶಿ -2 ಹುದ್ದೆಗೆ ಬಡ್ತಿ ನೀಡಬೇಕು, 20-30 ವರ್ಷ ಸೇವೆ ಸಲ್ಲಿಸಿರುವ ಪಂಪ್ ಆಪರೇಟರ್, ಕಸ ಗುಡಿಸುವವರು, ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್ ಮತ್ತು ಇತರೆ ಅಪರ ಕಾರ್ಯದರ್ಶಿ ಹುದ್ದೆಗೆ ಎಂ.ಎಸ್. ಸ್ವಾಮಿಯವರ ವರದಿ ಆಧಾರದಲ್ಲಿ ಏಕಕಾಲಕ್ಕೆ ಅನುಮೋದನೆ ನೀಡಬೇಕು.

ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಗಣಕಯಂತ್ರ ಸಹಾಯಕ ನೌಕರರಿಗೆ ಅನುಮೋದನೆ ನೀಡಿ ಅವರಿಗೂ ಬಡ್ತಿ ನೀಡಬೇಕು, 1253 ಗ್ರೇಡ್-2 ಪಂಚಾಯಿತಿಗಳನ್ನು ಗ್ರೇಡ್ -1 ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಬೇಕು, ಗ್ರಾ.ಪಂ. ನೌಕರರ ಸೇವಾ ನಿಯಮಗಳು ಅಂತಿಮ ಗೊಳಿಸಬೇಕು, ನಿವೃತ್ತ ನೌಕರರಿಗೆ 20 ತಿಂಗಳ ಗ್ರಾಚ್ಯುಟಿ (ಉಪದಾನ) ಮಂಜೂರಾತಿಗಾಗಿ ಹಾಗೂ ಹಣ ಒದಗಿಸಲು ಸೂಕ್ತ ಕ್ರಮ ಜರುಗಿಸಬೇಕು, ನಿವೃತ್ತಿ ವೇತನ ಹಾಗೂ ವೈದ್ಯಕೀಯ ವೆಚ್ಚ ಮಂಜೂರು ಮಾಡಬೇಕು, ಜಿಲ್ಲೆಯಲ್ಲಿನ ಗ್ರಾ.ಪಂ. ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನ ತುಟ್ಟಿ ಭತ್ಯೆ, ಬಾಕಿ ವೇತನ ನೀಡಬೇಕು, ಗ್ರಾ.ಪಂ.ಯಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರ ಜೇಷ್ಠತಾ ಪಟ್ಟಿ ಬಿಡುಗಡೆ ಮಾಡಬೇಕು, ಗ್ರಾ.ಪಂ.ನಲ್ಲಿ ದುಡಿಯುತ್ತಿರುವ ಎಲ್ಲಾ ನೌಕರರನ್ನು ಅನುಮೋದನೆಗೊಳಿಸಿ ಅವರ ಹೆಸರನ್ನು ಪಂಚತಂತ್ರದಲ್ಲಿ ಅಳವಡಿಸಬೇಕು ಮತ್ತು ಸರ್ಕಾರ ಅವರಿಗೆ ನೇರವಾಗಿ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವದೆಂದು ಭರತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ನೌಕರರ ಸಂಘದ ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಟಿ.ಜಿ. ಸಚಿತ, ಮಡಿಕೇರಿ ತಾಲೂಕು ಕಾರ್ಯದರ್ಶಿ ಬಿ.ಜೆ. ಲೀಲಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಪಿ. ಉಮೇಶ್ ಹಾಗೂ ಉಪ ಕಾರ್ಯದರ್ಶಿ ಎಂ.ಎ. ಹರೀಶ್ ಉಪಸ್ಥಿತರಿದ್ದರು.