ತಲಕಾವೇರಿ, ಅ. 26: ದೈವಿಕ ಸ್ಥಳದಲ್ಲಿ ಹುಟ್ಟಿ ನಾಡಿನ ಜೀವಜಲವೆನಿಸಿರುವ ಕಾವೇರಿ ಬಗ್ಗೆ ಪೂಜ್ಯ ಭಾವನೆ ತೋರುವ ಮೂಲಕ ನದಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕಾಗಿದೆ ಎಂದು ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕರೆ ನೀಡಿದ್ದಾರೆ.

ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಳ್ಳಲಾದ 8ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದರು. ವಿಶ್ವದ ಯಾವದೇ ಭಾಗದಲ್ಲಿ ನದಿಗಳನ್ನು ಪೂಜಿಸುವ ಸಂಸ್ಕøತಿ ಕಂಡು ಬರುವದಿಲ್ಲ. ಭಾರತ ದೇಶದಲ್ಲಿ ಮಾತ್ರ ನದಿ, ವನ, ಗೋಮಾತೆ, ಭೂಮಾತೆಗಳನ್ನು ಪೂಜಿಸುವದನ್ನು ಕಾಣಬಹುದು.

ಇತ್ತೀಚಿನ ದಿನಗಳಲ್ಲಿ ಜೀವನದಿ ಕಾವೇರಿ ಹಲವು ಕಾರಣಗಳಿಂದ ಮೂಲದಿಂದಲೇ ಕಲುಷಿತಗೊಳ್ಳುವ ಮೂಲಕ ಜನರು ನೇರವಾಗಿ ಬಳಸಲು ಅಸಾಧ್ಯವೆನಿಸಿರುವದು ವಿಷಾದನೀಯ ಎಂದ ಶ್ರೀಗಳು, ಜಾಗೃತಿ ರಥಯಾತ್ರೆ ಮೂಲಕ ಜನರಿಗೆ ನದಿಯ ಪಾವಿತ್ರ್ಯತೆ, ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿರುವ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪವನ್ನು ಅತಿಯಾಗಿ ರಂಜಿಸಿ ವರದಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಯಲ್ಲಿ ದಿಢೀರನೆ ಏರುಪೇರು ಉಂಟಾಗಿದೆ. ಪ್ರಕೃತಿ ಸಹಜವಾಗಿ ಕೆಲವೊಮ್ಮೆ ವಿಕೋಪಕ್ಕೆ ತೆರಳುವದು ಸಾಮಾನ್ಯ ಪ್ರಕ್ರಿಯೆ. ಇದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳ ಬೇಕಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖ ರಮಾನಂದ ಸ್ವಾಮೀಜಿ, ಪ್ರಕೃತಿಯನ್ನು ಆರಾಧಿಸುವ ಮೂಲಕ ಅದರ ಅನುಭವ ಪಡೆಯಬೇಕು. ಪ್ರಕೃತಿ ಪರಿಸರ ನಾಶವಾಗದಂತೆ ಎಚ್ಚರವಹಿಸುವದು ನಮ್ಮ ಆದ್ಯ ಕರ್ತವ್ಯವಾಗಿದೆ. ನದಿ ತಟಗಳಲ್ಲಿ ಸ್ವಚ್ಛತೆ ಕಾಪಾಡಿ ಸ್ವಚ್ಛ ಕಾವೇರಿ ನಿರ್ಮಾಣ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿ ಬೆಳೆಸಿ ಹಸ್ತಾಂತರಿಸುವದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ದುರಂತ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದ ರಮಾನಂದ ಸ್ವಾಮೀಜಿ, ಜೀವನದಿ ಕಾವೇರಿಯ ಹರಿವಿನಲ್ಲಿ ಏರುಪೇರಾದಲ್ಲಿ ದಕ್ಷಿಣ ಭಾರತದ ಜನತೆ ಆತಂಕ ಎದುರಿಸಬೇಕಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಿಡಗಳನ್ನು ಹಸ್ತಾಂತರಿಸುವ ಮೂಲಕ ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ರಥಯಾತ್ರೆಗೆ ಚಾಲನೆ ನೀಡಿದರು.

ಇದಕ್ಕೂ ಮುನ್ನಾ ಕಾವೇರಿ ಕುಂಡಿಕೆ ಬಳಿ ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿ 9 ಕಳಶಗಳಲ್ಲಿ ಪವಿತ್ರ ತೀರ್ಥವನ್ನು ತುಂಬಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಮತ್ತು ಪ್ರಧಾನ ಅರ್ಚಕ ನಾರಾಯಣಾಚಾರ್, ಅಖಿಲ ಭಾರತ ಕಾಫಿ ಮಂಡಳಿ ಉಪಾಧ್ಯಕ್ಷ ರೀನಾ ಪ್ರಕಾಶ್ ಅವರುಗಳು ರಥಯಾತ್ರೆಗೆ ಶುಭ ಕೋರಿದರು.

ಈ ಸಂದರ್ಭ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷರಾದ ಫಿಲಿಪ್ ವಾಸ್, ಪ್ರಕಾಶ್, ಭಾಗಮಂಡಲ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಶೋಕ್, ನದಿ ಸ್ವಚ್ಛತಾ ಆಂದೋಲನದ ಕರ್ನಾಟಕ, ತಮಿಳುನಾಡು ಪ್ರಾಂತ್ಯದ ಸಂಚಾಲಕ ಎಂ.ಎನ್. ಚಂದ್ರಮೋಹನ್, ವಾಸು ರಾಮಚಂದ್ರನ್, ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ವೇದಾಂತನಂದ, ಸ್ವಾಮಿ ನಾಗೇಶ್ವರಾನಂದ, ಸ್ವಾಮಿ ಶರವಣಾನಂದ, ಮಾತಾಜಿಗಳಾದ ಜ್ಞಾನೇಶ್ವರಿ ಗಿರಿ, ವಿದ್ಯಾಂಬ ಸರಸ್ವತಿ, ಸ್ವಾಮಿ ಆತ್ಮಾನಂದ ಮತ್ತಿತರರು ಇದ್ದರು.

ರಥಯಾತ್ರೆ ಭಾಗಮಂಡಲಕ್ಕೆ ಆಗಮಿಸಿ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸಂಗಮದಲ್ಲಿ ಮಹಾ ಆರತಿ ಬೆಳಗಲಾಯಿತು.