ಕುಶಾಲನಗರ, ಅ. 26: ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕುಶಾಲನಗರ ಹೋಬಳಿ ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿವಿಧ ಪಕ್ಷಗಳ ಪ್ರಮುಖರು ಹಾಗೂ ನಾಗರಿಕರೊಂದಿಗೆ ಚುನಾವಣಾ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮಕ್ಕೆ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ನಗರ ಘಟಕದ ಅಧ್ಯಕ್ಷರುಗಳಾದ ಕೆ.ಜಿ. ಮನು, ಜೋಸೆಫ್ ವಿಕ್ಟರ್ ಸೋನ್ಸ್, ವಿ.ಎಸ್. ಆನಂದಕುಮಾರ್, ಆಬಿದ್ ಅವರೊಂದಿಗೆ ಪಟ್ಟಣದ ಹಿರಿಯ ನಾಗರಿಕರು, ಸಂಘಟನೆಗಳ ಪ್ರಮುಖರು, ಪತ್ರಕರ್ತರು ಸಂವಾದ ನಡೆಸಿದರು. ಹಿಂದಿನ ಪಂಚಾಯಿತಿ ಆಡಳಿತ ಕಾರ್ಯವೈಖರಿ ಬಗ್ಗೆ ಟೀಕೆ ಟಿಪ್ಪಣಿಗಳೊಂದಿಗೆ ಪಟ್ಟಣದ ಪ್ರಮುಖ ಯೋಜನೆಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ ಚರ್ಚೆ ನಡೆಯಿತು. ವಾರ್ಡ್ ಸಭೆಗಳನ್ನು ಆಯೋಜಿಸುವ ಮೂಲಕ ನಾಗರಿಕರ ಸಮಸ್ಯೆಗಳನ್ನು ಅರಿತು ಪರಿಹರಿಸಲು ಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತಗೊಂಡಿತು.

ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಆಶಾ ಅಶೋಕ್, ಡಾ. ಹರೀಶ್ ಶೆಟ್ಟಿ, ಹಿರಿಯ ನಾಗರಿಕ ಗಿರೀಶ್ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ನಿಭಾಯಿಸಬೇಕೆಂದರು.

ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಟ್ಟಣದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಲ್ಲಿ ಸ್ವಚ್ಛ ಕುಶಾಲನಗರ, ಸ್ವಚ್ಛ ಕಾವೇರಿ ನಿರ್ಮಾಣ ಸಾಧ್ಯ ಎಂದರು.

ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು ಮಾತನಾಡಿ, ಇ-ಸ್ವತ್ತು ವಿಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆ ನಿವಾರಣೆಗೆ ತಮ್ಮ ಪಕ್ಷ ಒತ್ತು ನೀಡಲಿದೆ. ಪ್ಲಾಸ್ಟಿಕ್ ತಡೆಗೆ ವಿಶೇಷ ಆದ್ಯತೆ ನೀಡಲಾಗುವದು ಎಂದರು.

ಜೆಡಿಎಸ್ ನಗರಾಧ್ಯಕ್ಷ ವಿ.ಎಸ್. ಆನಂದಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿಯಲ್ಲಿ ಸುಲಲಿತ ಆಡಳಿತ ವ್ಯವಸ್ಥೆ, ವಾರ್ಡ್‍ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ತಮ್ಮ ಪಕ್ಷದ ಮೂಲಕ ಆದ್ಯತೆ ನೀಡಲಾಗುವದು ಎಂದರು.

ಎಸ್‍ಡಿಪಿಐ ನಗರಾಧ್ಯಕ್ಷ ಆಬಿದ್ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲಪಿಸುವಂತಹ ಜನಸ್ನೇಹಿ ಆಡಳಿತ ವ್ಯವಸ್ಥೆ ಬಗ್ಗೆ ಚಿಂತನೆ ಹೊಂದಿದ್ದು ಈ ನಿಟ್ಟಿನಲ್ಲಿ ವಾರ್ಡ್‍ಗಳಲ್ಲಿ ಕಚೇರಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವದು ಎಂದರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ಕುಶಾಲನಗರ ಸಂಘದ ಉಪಾಧ್ಯಕ್ಷ ನಾಗರಾಜ ಶೆಟ್ಟಿ, ಕಾರ್ಯದರ್ಶಿ ರಘು ಹೆಬ್ಬಾಲೆ, ಖಜಾಂಚಿ ಸುನಿಲ್ ಪೊನ್ನೇಟಿ, ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪ್ರಮುಖ ಎಂ. ಕೃಷ್ಣ ಮತ್ತಿತರರು