ಜಸ್ಟೀಸ್ ಬೋಪಣ್ಣ ಅವರಿಗೆ ಬೀಳ್ಕೊಡುಗೆ

ಬೆಂಗಳೂರು, ಅ. 26: ಜಸ್ಟೀಸ್ ಬೋಪಣ್ಣ ಅವರಿಗೆ ರಾಜ್ಯ ಬಾರ್ ಕೌನ್ಸಿಲ್ ವತಿಯಿಂದ ಇಂದು ಹೈಕೋರ್ಟ್ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಎ.ಎಸ್. ಬೋಪಣ್ಣ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ನ್ಯಾಯಾಧೀಶರಾಗಿದ್ದ ಅಜಿಕುಟೀರಾ ಸೋಮಯ್ಯ ಬೋಪಣ್ಣ ಅವರನ್ನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕ ಮಾಡಿ, ತಾ. 24 ರಂದು ಹೊರಡಿಸಿರುವ ಆದೇಶವನ್ನು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ರಾಜೇಂದರ್ ಕಶ್ಯಪ್ ಪ್ರಕಟಿಸಿದ್ದಾರೆ. ಬೋಪಣ್ಣ ಅವರನ್ನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಸುಪ್ರೀಂಕೋರ್ಟ್ ಕೋಲಿಜಿಯಂ ಇತ್ತೀಚಿಗೆ ಶಿಫಾರಸ್ಸು ಮಾಡಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನಿ ಗೊಗೊಯ್ ನೇತೃತ್ವದ ಕೊಲೀಜಿಯಂ ಬೋಪಣ್ಣ ಅವರನ್ನು ಅವಿರೋಧವಾಗಿ ನೇಮಕಗೊಳಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಮೇ 20, 1959ರಲ್ಲಿ ಜನಿಸಿದ ಬೋಪಣ್ಣ, 1984 ರಿಂದ ವಕೀಲಿ ವೃತ್ತಿ ಆರಂಭಿಸಿದ್ದರು. ಸಿವಿಲ್ ಹಾಗೂ ಲೇಬರ್ ಕೋರ್ಟ್‍ನಲ್ಲಿ ನಾಗರಿಕ, ಸಂವಿಧಾನಾತ್ಮಕ, ಕಂಪೆನಿ, ಸೇವಾ ಮತ್ತು ಕಾರ್ಮಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಭ್ಯಸಿಸಿ ಕೇಂದ್ರ ಸಾರ್ವಜನಿಕ ವಲಯದ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 2006 ಜನವರಿ 6 ರಂದು ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2007 ಮಾರ್ಚ್ 1 ರಿಂದ ಖಾಯಂ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.

2 ಸಾವಿರ ಪ್ರತಿಭಟನಾಕಾರರ ಬಂಧನ

ಶಬರಿಮಲೆ, ಅ. 26: ಶಬರಿಮಲೆ ಅಯ್ಯಪ್ಪ ದೇಗುಲದ ಆವರಣದಲ್ಲಿ ಹಿಂಸೆಗೆ ಪ್ರೇರೇಪಿಸಿದ 2 ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೆÇಲೀಸರು ಬಂಧಿಸಿದ್ದಾರೆ. ಮನೋರಮಾ ಪತ್ರಿಕೆ ವರದಿ ಮಾಡಿರುವ ಪ್ರಕಾರ, ಸುಮಾರು 1500 ಮಂದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರತಿಭಟನಾಕಾರರ ಮೇಲೆ ಶಿಸ್ತು ಕ್ರಮವಾಗಿ ಇಂದು ಮೂರನೇ ದಿನ ಕೂಡ 451 ಮಂದಿ ವಿರುದ್ಧ ಕೇಸುಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಂಕೆಯ ಆಧಾರದ ಮೇಲೆ 210 ಮಂದಿಯ ಫೆÇೀಟೋಗಳನ್ನು ಜಿಲ್ಲಾ ಪೆÇಲೀಸ್ ವರಿಷ್ಠರು ನೀಡಿದ್ದಾರೆ. ಮುಖ್ಯಮಂತ್ರಿ ಪಿನರಾಯಿ ವಿಜಯನ್ ನೇತೃತ್ವದಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಸಭೆ ಬಳಿಕ ಈ ಬಂಧನ ನಡೆದಿದೆ. ಪ್ರತಿಭಟನಾಕಾರರನ್ನು ಬಂಧಿಸಿದ ಕುರಿತು ಮಾತನಾಡಿದ ಕೇರಳ ಬಿಜೆಪಿ ಮುಖ್ಯಸ್ಥ ಪಿಎಸ್ ಶ್ರೀಧರನ್ ಪಿಳ್ಳೈ, ಭಕ್ತರ ಮೇಲೆ ಪೆÇಲೀಸರ ಕ್ರಮ ಖಂಡಿಸಿ ತಾವು ಹೈಕೋರ್ಟ್ ಮೊರೆ ಹೋಗುವದಾಗಿ ಹೇಳಿದ್ದಾರೆ. 10ರಿಂದ 50 ವರ್ಷದೊಳಗಿನ ಯುವತಿಯರು ಮತ್ತು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆಯಾಗಿದೆ ಎಂದು ಅಲ್ಲಿನ ಭಕ್ತರು ಆರೋಪಿಸುತ್ತಿದ್ದಾರೆ.

ದೇವಮಾನವ ದಾತಿ ವಿರುದ್ಧ ಅತ್ಯಾಚಾರ ಕೇಸ್

ನವದೆಹಲಿ, ಅ. 26: ಸ್ವಯಂ ಘೋಷಿತ ದೇವಮಾನವ ದಾತಿ ಮಹಾರಾಜ್ ಮತ್ತು ಇತರ ಮೂವರ ವಿರುದ್ಧ ಸಿಬಿಐ ಶುಕ್ರವಾರ ಅತ್ಯಾಚಾರ ಮತ್ತು ಅಸಹಜ ಲೈಂಗಿಕತೆ ಕೇಸು ದಾಖಲಿಸಿದೆ. ತಾ. 22 ರಂದು ಸುಪ್ರೀಂ ಕೋರ್ಟ್, ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಸಿಬಿಐಗೆ ಕೇಸು ವರ್ಗಾವಣೆ ಮಾಡುವಂತೆ ಆದೇಶ ನೀಡುವ ಮುನ್ನ ತಮ್ಮನ್ನು ಕೇಳಿರಲಿಲ್ಲ ಎಂದು ಕಳೆದ ವಾರ ವಿವಾದಿತ ಸ್ವಘೋಷಿತ ದೇವ ಮಾನವ ದಾತಿ ಮಹಾರಾಜ್ ಸುಪ್ರೀಂ ಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಈ ಹಿಂದೆ ಕೇಸಿನ ವಿಚಾರಣೆಯನ್ನು ದೆಹಲಿ ಪೆÇಲೀಸ್ ಅಪರಾಧ ವಿಭಾಗ ಕೈಗೆತ್ತಿಕೊಂಡಿತ್ತು. 2 ವರ್ಷಗಳ ಹಿಂದೆ ತನ್ನ ಶಿಷ್ಯೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ದಾತಿ ಮಹಾರಾಜ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 377 (ಅಸಹಜ ಲೈಂಗಿಕತೆ), 354 (ಹಿಂಸೆ) ಮತ್ತು 34 (ಸಾಮಾನ್ಯ ಉದ್ದೇಶ)ದಡಿ ಕೇಸು ದಾಖಲಿಸಲಾಗಿತ್ತು. ಆದರೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ದಾತಿ ಮಹಾರಾಜ್ ಆರೋಪಿಸಿದ್ದರು. ಕಳೆದ ಜೂನ್ 7 ರಂದು ದಾತಿ ಮಹಾರಾಜ್ ವಿರುದ್ಧ ದೂರು ದಾಖಲಿಸಿ ಜೂನ್ 11 ರಂದು ಎಫ್‍ಐಆರ್ ದಾಖಲಿಸಲಾಗಿತ್ತು.

ಮತ್ತೆ ತಮ್ಮ ಸಾವಿನ ಬಗ್ಗೆ ಸಿಎಂ ಮಾತು

ಮಂಡ್ಯ, ಅ. 26: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೆ ತಮ್ಮ ಸಾವಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಅನೇಕ ಬಾರಿ ಸಾರ್ವಜನಿಕ ಭಾಷಣಗಳಲ್ಲಿ ಭಾವನಾತ್ಮಕ ಭಾಷಣ ಮಾಡಿ ಸುದ್ದಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಅದೇ ರೀತಿಯ ಮಾತುಗಳನ್ನಾಡಿದ್ದಾರೆ. ನವೆಂಬರ್ 3 ರಂದು ನಡೆಯುವ ಉಪ ಚುನಾವಣೆಗೆ ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ನಾನು ಈ ಹಿಂದೆ ಇಸ್ರೇಲ್‍ಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾಗಲೇ ಸಾಯಬೇಕಾಗಿತ್ತು. ದೇವರ ದಯೆಯಿಂದ ಬದುಕಿ ಬಂದೆ. ಆದರೆ ಎಷ್ಟು ದಿನ ಬದುಕಿರುತ್ತೇನೆ ಗೊತ್ತಿಲ್ಲ, ಬದುಕಿರುವವರೆಗೂ ಜನರ ಸೇವೆಯನ್ನು ಮಾಡುತ್ತೇನೆ ಎಂದರು. ಮುಂದುವರಿದು ಮಾತನಾಡಿದ ಸಿಎಂ ಕುಮಾರಸ್ವಾಮಿ, ಜನರ ಮೇಲೆ ನನಗಿರುವ ಪ್ರೀತಿಯನ್ನು ಹಾಳು ಮಾಡಲು ಈ ಜನ್ಮದಲ್ಲಿ ಯಾರಿಗೂ ಸಾಧ್ಯವಿಲ್ಲ. ನಾನು ಬದುಕಿರುವದೇ ನಿಮ್ಮಂತಹವರ ಸೇವೆಗೆ. ನಾನು ಹಣ ಸಂಪಾದಿಸಬೇಕಿಲ್ಲ. ಹಣ ಸಂಪಾದನೆ ಮಾಡುವದು ನನ್ನ ಉದ್ದೇಶವೂ ಅಲ್ಲ. ಎಷ್ಟು ದಿನ ಬದುಕುತ್ತೇನೆ ಎಂಬದೂ ಮುಖ್ಯವಲ್ಲ. ದೇವರು ನನಗೆ ಕೊಟ್ಟಿರುವ ಈ ಅಧಿಕಾರವನ್ನು ಜನರ ಶ್ರೇಯೋಭಿವೃದ್ಧಿಗೆ ಬಳಸಿ, ಪ್ರತಿಯೊಂದು ಕುಟುಂಬವನ್ನು ಯಾವ ರೀತಿ ಬದುಕಿಸುತ್ತೇನೆ ಎಂಬದೇ ನನ್ನ ಮುಂದಿರುವ ಸವಾಲು ಎಂದು ಹೇಳಿದರು.