``

ಸಾಹಿತ್ಯ ಪ್ರಕಾರದಲ್ಲಿ ಕಥೆ, ಕವನ, ಕಾದಂಬರಿ, ಚುಟುಕ, ವೈಚಾರಿಕ, ವೈಜ್ಞಾನಿಕ, ಚಾರಿತ್ರಿಕ, ಆಧ್ಯಾತ್ಮಿಕ, ವಿಮರ್ಶಾತ್ಮಾಕ ಬರಹಗಳು ಒಂದು ಬಗೆಯಾದರೆ, ಯಾವುದಾದರೊಂದು ಭಾಷೆಗೆ ನೂತನವಾಗಿ ಸಮಗ್ರ ಅರ್ಥಕೋಶ ರಚಿಸುವುದು ಇನ್ನೊಂದು ಬಗೆಯದು. ಕಥೆ, ಕವನ, ಕಾದಂಬರಿಯಂತಹದನ್ನು ಕುಳಿತಲ್ಲಿಯೇ ಆಲೋಚಿಸಿ, ಕಲ್ಪಿಸಿ, ಊಹಿಸಿ ಬರೆಯಬಹುದು. ಆದರೆ ಅರ್ಥಕೋಶದಂತಹ ಅಪರೂಪದ ಗ್ರಂಥ ರಚಿಸುವುದು ಸುಲಭದ ಸಂಗತಿಯಲ್ಲ. ಇದಕ್ಕೆ ವಿಶೇಷ ಭಾಷಾಜ್ಞಾನ, ಅತಿಯಾದ ತಾಳ್ಮೆ, ಸಮರ್ಪಣಾ ಮನೋಭಾವ, ಅಧ್ಯಯನಾಸಕ್ತಿ, ಸಾಧನೆಯ ಗುರಿ, ಸವಾಲಿನ ಹಠ, ಕಠಿಣ ಪರಿಶ್ರಮ ಇತ್ಯಾದಿ ವಿಶೇಷ ಗುಣಗಳಿರಬೇಕಾದುದು ತೀರ ಅವಶ್ಯ.

ಅಲ್ಪಸಂಖ್ಯಾತ ಕೊಡವ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇದ್ದರೂ ಜನಪ್ರಿಯ ಗ್ರಾಂಥಿಕ ಭಾಷೆಯಾಗಿ ಇದರ ಚರಿತ್ರೆ ಇನ್ನೂರು ವರ್ಷಗಳನ್ನು ಮೀರಿರುವುದಿಲ್ಲ. 1900 ಆದಿಭಾಗದಲ್ಲಿಯೇ ಕೊಡವ ಭಾಷೆಗೆ ಪ್ರತ್ಯೇಕ ಲಿಪಿಗೆ ಪ್ರಯತ್ನ ನಡೆದಿತ್ತಾದರೂ ಸಫಲತೆ ಕಾಣಲಿಲ್ಲ. ಹಾಗೆಯೇ 1970ನೇ ದಶಕದಿಂದಲೇ ಕೊಡವ ಭಾಷೆಗೆ ಸಮಗ್ರ ಅರ್ಥಕೋಶ ರೂಪಿಸುವ ವಿಷಯದಲ್ಲಿಯೂ ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಸಾಫಲ್ಯ ಕಾಣಲಿಲ್ಲ.

ಇದರ ಮಧ್ಯೆ ಭಾಷಾಜ್ಞಾನಿಯೂ, ಕವಿಯೂ, ತ್ರಿಭಾಷಾ ಸಾಹಿತಿಯೂ ಆಗಿದ್ದ ಡಾ. ಐ.ಮಾ. ಮುತ್ತಣ್ಣನವರು 1978ರಲ್ಲಿ ಕೊಡವ ಭಾಷೆಗೆ ಅರ್ಥಕೋಶ ರೂಪಿಸಿದರು. ಅದೇ ಕಾಲಘಟ್ಟದಲ್ಲಿ ಶ್ರೀಮಂಗಲ ಕಾಲೇಜಿನ ಉಪನ್ಯಾಸಕರಾಗಿದ್ದ ಟಿ.ಎಸ್. ಗೋಪಾಲ್ ಎಂಬವರು ಚಿಕ್ಕದಾದ ಅರ್ಥಕೋಶವೊಂದನ್ನು ತಯಾರಿಸಿದರು. 1996ರಲ್ಲಿ ಉಳ್ಳಿಯಡ ಎಂ. ಪೂವಯ್ಯ ಅವರು ಕೊಡವ ಅಕಾಡೆಮಿ ಅಧ್ಯಕ್ಷರಾಗಿದ್ದಾಗ “ಕೊಡವ-ಕನ್ನಡ-ಇಂಗ್ಲೀಷ್ ಕೈಪುಡಿ” ಎಂಬ ಪುಸ್ತಕವನ್ನು, “ಕೊಡವ ಮಗ್ಗಿ ಪುಸ್ತಕ” ಎಂಬ ಇನ್ನೊಂದು ಕೋಷ್ಠಕ ಮಾದರಿಯ ಪುಸ್ತಕವನ್ನೂ ಅಕಾಡೆಮಿ ವತಿಯಿಂದ ಹೊರತಂದಿದ್ದರು. ಇವು ಅರ್ಥಕೋಶಕ್ಕೆ ಪೂರಕವಾದ ಸಾಹಿತ್ಯ ಆಗಿತ್ತು. ಆದರೂ, ಕೊಡವ ಭಾಷೆಗೆ ಸಮಗ್ರ ಅರ್ಥಕೋಶ ತಯಾರಾಗಬೇಕೆಂಬ ಹಂಬಲ ಅಳಿಸಿರಲಿಲ್ಲ. ಯಾವುದೇ ಅಭಿವೃದ್ಧಿಶೀಲ ಭಾಷೆಯೊಂದು ಬಲಕೂಡಬೇಕಾದರೆ, ಭಾಷೆಯು ಸಾಮಾಜಿಕವಾಗಿ ಸ್ಥಾನ ಪಡೆಯಬೇಕಾದರೆ, ಭಾಷಾ ಪ್ರಪಂಚದಲ್ಲಿ ಸೂಕ್ತ ಮಾನ್ಯತೆ ಗಳಿಸಬೇಕಿದ್ದರೆ... ಆ ಭಾಷೆಗೆ ತನ್ನದೇ ಆದ ಅರ್ಥಕೋಶ ಇರಲೇಬೇಕು.

ಈ ವಾಸ್ತವಿಕತೆಯನ್ನು ಅರಿತ ಅರಣ್ಯ ವಿಜ್ಞಾನಿ ಡಾ|| ಬೊವ್ವೇರಿಯಂಡ ಸಿ. ಉತ್ತಯ್ಯ ಮತ್ತವರ ಪತ್ನಿ ತಂಗಮ್ಮ ಉತ್ತಯ್ಯ ದಂಪತಿಗಳು 2000ನೇ ಇಸವಿಯಲ್ಲಿ ಕೊಡವ ಅರ್ಥಕೋಶ ತಯಾರಿಯ ಕಾಯಕಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಸುಮಾರು 14 ವರ್ಷಗಳ ಕಾಲ ನಿರಂತರ ಶ್ರಮಿಸಿ 2014ರಲ್ಲಿ ಕೊಡವ-ಕನ್ನಡ-ಇಂಗ್ಲೀಷ್ ಅರ್ಥಕೋಶವನ್ನು ಬರೆದು ಮುಗಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ “ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ”ವು ಇದನ್ನು “ಕೊಡವ ಅರಿವೋಲೆ” ಎಂಬ ಹೆಸರಿನಲ್ಲಿ 2016ರಲ್ಲಿ ಪ್ರಕಟಿಸಿತು.

900 + ಪುಟಗಳ ಸುಮಾರು 14 ಸಾವಿರ ಕೊಡವ ಶಬ್ಧಗಳ ಈ “ಕೊಡವ ಅರಿವೋಲೆ” ಎಂಬ ಅರ್ಥಕೋಶದ ಪ್ರತಿಯೊಂದಕ್ಕೆ 500 ರೂಪಾಯಿ ನಿಗದಿಪಡಿಸಲಾಯಿತು. ಶತಮಾನಕ್ಕೊಮ್ಮೆ ಎಂಬಂತೆ ಇಂತಹ ಅಪರೂಪದ ವಿಶಿಷ್ಟ ಗ್ರಂಥ ಬಿಡುಗಡೆ ಆಗುವಂತಹದಾಗಿದ್ದರೂ, ಮಂಗಳೂರು ವಿಶ್ವವಿದ್ಯಾನಿಲಯದವರು ಮಂಗಳೂರಿನಲ್ಲಿಯೇ ಇದನ್ನು ತರಾತುರಿಯಲ್ಲಿ ಬಿಡುಗಡೆ ಮಾಡುವ ಶಾಸ್ತ್ರ ಮುಗಿಸಿ ಕೈ ತೊಳೆದುಬಿಟ್ಟರು! ಅರ್ಥಕೋಶದ ವಿಶೇಷತೆ, ಪ್ರತಿಗಳ ಲಭ್ಯತೆ, ಮಾರಾಟ ಪ್ರಕ್ರಿಯೆ.... ಇಂತಹುಗಳನ್ನು ಮಾಡಲೇ ಇಲ್ಲ. ಲೇಖಕ ದಂಪತಿಗಳನ್ನು ಸಾರ್ವಜನಿಕವಾಗಿ ಸನ್ಮಾನ ಮಾಡಿ ಗೌರವಿಸಲೂ ಇಲ್ಲ. ಇಂತಹ ಚಿಕ್ಕಪುಟ್ಟ ಲೋಪದೋಷಗಳು ಏನೇ ಇದ್ದರೂ, ಮಂಗಳೂರು ವಿಶ್ವವಿದ್ಯಾನಿಲಯದ “ಕೊಡವ ಸಾಂಸ್ಕøತಿಕ ಅಧ್ಯಯನ ಪೀಠ”, “ಕೊಡವ ಅರಿವೋಲೆ” ಎಂಬ ಅರ್ಥಕೋಶ ಗ್ರಂಥವನ್ನು ಪ್ರಕಟಿಸುವುದರ ಮೂಲಕ ತನ್ನ ಘನತೆ-ಗೌರವವನ್ನು ಹೆಚ್ಚಿಸಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಲೇಖಕರ ಪರಿಚಯ : ಕಡಿಯತ್‍ನಾಡ್ ಚೆಯ್ಯಂಡಾಣೆ-ನರಿಯಂದಡ ಗ್ರಾಮ ಬೊವ್ವೇರಿಯಂಡ ಚೆಟ್ಟಿಚ ನಂಜವ್ವ ದಂಪತಿಗಳ ಪುತ್ರ ಉತ್ತಯ್ಯ 1939ರಲ್ಲಿ ಜನನ. ಸ್ಥಳೀಯ ಶಾಲಾ-ಕಾಲೇಜುಗಳಲ್ಲಿ ಓದಿದ ನಂತರ ಧಾರವಾಡ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ (ಅಗ್ರಿ) ಡಿಗ್ರಿ ಮಾಡಿದರು. ಅಂದಿನ ಕೊಡಗು ಸರಕಾರದಿಂದ “ಮೆರಿಟ್ ಸ್ಕಾಲರ್ ಶಿಪ್” ಪಡೆದು ವ್ಯಾಸಂಗ ಪೂರೈಸಿದ ಇವರು, ರಾಜ್ಯ ಸರಕಾರದ ವ್ಯವಸಾಯ-ತೋಟಗಾರಿಕೆ ಇಲಾಖೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆ, ವಿದ್ಯಾಕಾಂಕ್ಷಿ ಆಗಿದ್ದರಿಂದ ಸರಕಾರವೇ ಇವರನ್ನು ಎಂ.ಎಸ್ಸಿ (ಅಗ್ರಿ)ಗೆ ಧಾರವಾಡ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿತು. ಇದರ ಬಳಿಕ, ಬೆಂಗಳೂರು ಕೃಷಿಕಾಲೇಜಿನಲ್ಲಿ ಪಿ.ಹೆಚ್.ಡಿ (ಹಾರ್ಟಿಕಲ್ಚರ್) ಮಾಡಿದರು.

ಬಳಿಕ ಬ್ರಹ್ಮಾವರದಲ್ಲಿ ಅಸೋಸಿಯೇಟ್ ಪ್ರೊಫೆಸರ್, ಮೂಡಿಗೆರೆಯಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸೇವೆ. ಅದರ ನಂತರ ಪೊನ್ನಂಪೇಟೆ ಅರಣ್ಯ ಕಾಲೇಜಿಗೆ ವರ್ಗಾವಣೆ. ಪೊನ್ನಂಪೇಟೆಯಲ್ಲಿ ಕಾಲೇಜು ಮುಖ್ಯಸ್ಥರಾಗಿ 1999ರಲ್ಲಿ ಸೇವೆಯಿಂದ ನಿವೃತ್ತಿ, ಸೇವಾವಧಿಯಲ್ಲಿ ಒಟ್ಟು 97 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದು.

ನಿವೃತ್ತಿಯ ನಂತರ ಹುಟ್ಟೂರಿಗೆ ಆಗಮಿಸಿ ಕೃಷಿ ಸೇವೆ, ಕಾಫಿತೋಟದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು. ಇಂದಿಗೂ ವ್ಯವಸಾಯ ಬದುಕನ್ನೇ ಮೆಚ್ಚಿಕೊಂಡಿದ್ದಾರೆ. ಇದರ ಮಧ್ಯೆ 1983ರಲ್ಲಿ ಕೋಳೇರ ಅಯ್ಯಮ್ಮ-ನೀಲವ್ವ ದಂಪತಿಗಳ ಪುತ್ರಿ ತಂಗಮ್ಮರನ್ನು ವಿವಾಹ ಆಗಿದ್ದಾರೆ. ಇವರ ನೀಲಮ್ಮ ಎಂಬ ಪುತ್ರಿ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಡಿಗ್ರಿ ಮಾಡಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. 79 ವರ್ಷ ಪ್ರಾಯದ ಪ್ರೊಫೆಸರ್ ಬಿ.ಸಿ. ಉತ್ತಯ್ಯನವರು ಇಂದಿಗೂ ಪ್ರಕಟಿತ ಅರ್ಥಕೋಶದ ಪರಿಷ್ಕÀ್ಕರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರಕಾರ, ಸಮಾಜ, ಸಂಘ ಸಂಸ್ಥೆಗಳು ಶ್ರೀಯುತರ ವಿಶೇಷ ಸೇವೆಯನ್ನು ಪರಿಗಣಿಸಿ, ಮಾನ್ಯತೆ ಮಾಡದಿರುವುದು ಸಾಹಿತ್ಯಾಸಕ್ತರಿಗೆ ಅಸಮಾಧಾನಕರವಾಗಿದೆ.

ಸನ್ಮಾನ : ತಿರಿಬೊಳ್‍ಚ ಕೊಡವ ಸಂಘ, ಕೊಡವ ಮಕ್ಕಡ ಕೂಟ, ಜನಮನ ಕಲಾ ಸಂಘ, ಕಕ್ಕಬ್ಬೆ ಕೇಂದ್ರ ವಿದ್ಯಾಸಂಸ್ಥೆ, ಕಕ್ಕಬ್ಬೆ ದಿ ಹೈಲ್ಯಾಂಡರ್ಸ್ ಫ್ಯಾಮಿಲಿ ಕ್ಲಬ್ - ಈ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ 1.11.18ರಂದು ಕಕ್ಕಬ್ಬೆಯಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯವರ 150ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ನಡೆಯುವ ಸಂದರ್ಭದಲ್ಲಿ ಡಾ. ಬೊವ್ವೇರಿಯಂಡ ಸಿ. ಉತ್ತಯ್ಯ-ತಂಗಮ್ಮ ಉತ್ತಯ್ಯ ದಂಪತಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು. ಈ ಬಗೆಯ ಅಪರೂಪದ, ವಿಶಿಷ್ಟ ಸನ್ಮಾನವು ಸಾಹಿತ್ಯ ಸಾಧಕರಿಗೆ ಉತ್ತೇಜನವನ್ನೂ, ಸಾಹಿತ್ಯಾಕಾಂಕ್ಷಿಗಳಿಗೆ ಪ್ರೋತ್ಸಾಹ ವನ್ನೂ ನೀಡಿದಂತಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

? ಉಳ್ಳಿಯಡ ಎಂ. ಪೂವಯ್ಯ,

ಮಡಿಕೇರಿ