ಮಡಿಕೇರಿ, ಅ. 26: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಪೈಸಾರಿಯ ಸುಮಾರು 35 ಕುಟುಂಬಗಳಿಗೆ ನಿತ್ಯ ಸಂಚರಿಸಲು ಸೂಕ್ತ ರಸ್ತೆಯೊಂದಿಗೆ ವಾಹನ ಓಡಾಟಕ್ಕೆ ಮಾರ್ಗ ಕಲ್ಪಿಸಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ಇಂದು ಜಿಲ್ಲಾಡಳಿತ ಭವನ ಎದುರಿನಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.

ಮನವಿ ಸಾರಾಂಶ

ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನಲ್ಲಿ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಎಲ್ಲರೂ ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಕ್ಕಟ್ಟುಕಾಡು ಗ್ರಾಮದಿಂದ ಸಿದ್ದಾಪುರ ಸೇರಿದಂತೆ ಬೇರೆ ಪ್ರದೇಶಗಳಿಗೆ ತೆರಳಲು ಗುಹ್ಯ ಅಗಸ್ತ್ಯೇಶ್ವರ ದೇವಾಲಯದ ಮೂಲಕ ಕೇವಲ 4 ಅಡಿಗಳ ರಸ್ತೆ ಇದ್ದು, ಮನೆಗೆ ತೆರಳಲು ಯಾವದೇ ಸ್ವಂತ ವಾಹನ ಸಂಚಾರದ ರಸ್ತೆ ಇಲ್ಲದೆ ಹಲವಾರು ವರ್ಷಗಳಿಂದ ಕಷ್ಟ ಅನುಭವಿಸುವಂತಾಗಿದೆ. ಶಾಲಾ ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಗುಹ್ಯ ಅಗಸ್ತ್ಯೇಶ್ವರ ದೇವಾಲಯದಿಂದ ಸುಮಾರು 1 ಕಿ.ಮೀ.ಗೂ ಅಧಿಕ ದೂರ ಕಾಲ್ನಡಿಗೆಯಲ್ಲೇ ಸಂಚರಿಸಬೇಕಾಗಿದೆ. ವಾಹನ ಸಂಚಾರವಿಲ್ಲದ ಕಾರಣ ಈ ಹಿಂದೆ ಗರ್ಭಿಣಿ ಮಹಿಳೆಯು ಪ್ರಸವ ವೇದನೆಯ ಸಂದರ್ಭ ಎತ್ತಿಕೊಂಡು ಹೋಗಬೇಕಾದ ಸ್ಥಿತಿಯಲ್ಲಿ ತಾಯಿ ಹಾಗೂ ಮಗು ದಾರಿ ಮಧ್ಯದಲ್ಲಿ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಮಾತ್ರವಲ್ಲದೆ ಕಾವೇರಿ ನದಿ ನೀರಿನಲ್ಲಿ ಬಿದ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ವಾಹನ ಸಂಚಾರದ ರಸ್ತೆ ಇಲ್ಲದೆ ಸುಮಾರು ಒಂದು ಕಿ.ಮೀ. ಎತ್ತಿಕೊಂಡು ಬಂದರೂ ಆಸ್ಪತ್ರೆ ತಲಪುವ ಮುಂಚೆಯೇ ಆ ಪುಟ್ಟ ಬಾಲಕಿಯು ಪ್ರಾಣಬಿಟ್ಟಳು. ಪ್ರತಿ ಗ್ರಾಮದಲ್ಲಿ ವಿದ್ಯಾರ್ಥಿಗಳ ಮನೆ ಮುಂಭಾಗದಲ್ಲೇ ಶಾಲಾ ವಾಹನ ಬಂದು ಕರೆದುಕೊಂಡು ಹೋಗುವಾಗ, ಕಕ್ಕಟ್ಟುಕಾಡು ಗ್ರಾಮದ ಮಕ್ಕಳು ಪ್ರತಿದಿನವೂ 7 ಕಿ.ಮೀ.ಗೂ ಅಧಿಕ ದೂರ ನಡೆದುಕೊಂಡೇ ಹೋಗುವ ಯಾತನೆ ಹಲವಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಕಾಡಾನೆ ಹಾವಳಿಯೂ ಹೆಚ್ಚಾಗಿದ್ದು, 4 ಅಡಿಯ ರಸ್ತೆಯಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವದರಿಂದ ಶಾಲಾ ಮಕ್ಕಳು, ಸಾರ್ವಜನಿಕರು ಭಯದಿಂದಲೇ ಸಂಚರಿಸಬೇಕಾಗಿದೆ.

ಗ್ರಾಮಸ್ಥರ ದಶಕಗಳ ಹೋರಾಟದ ಫಲದಿಂದ ವೀರಾಜಪೇಟೆ ನ್ಯಾಯಾಲಯವು ಗುಹ್ಯ ಅಗಸ್ತ್ಯೇಶ್ವರ ದೇವಾಲಯದಿಂದ ಕಕ್ಕಟ್ಟುಕಾಡಿಗೆ 10 ಅಡಿಯ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನೀಡಬೇಕೆಂದು ಆದೇಶ ನೀಡಿದ್ದು, ತಿಂಗಳುಗಳು ಕಳೆದರೂ ರಸ್ತೆ ಆಗಲಿಲ್ಲ. ಪರಿಣಾಮ ಇಂದು ಈ ಸಾಂಕೇತಿಕ ಪ್ರತಿಭಟನೆಯಿಂದ ನಮಗೆ ನ್ಯಾಯ ದೊರಕದಿದ್ದಲ್ಲಿ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವದು ಎಂದು ಗ್ರಾಮಸ್ಥರು ಮನವಿಯೊಂದಿಗೆ ಗಮನ ಸೆಳೆದಿದ್ದಾರೆ.

ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಅಲ್ಲಿನ ಪ್ರಮುಖರಾದ ರೆಜಿತ್ ಕುಮಾರ್, ಅಜೀಜ್ ಸೇರಿದಂತೆ ಚಂದ್ರ ಹಾಗೂ ಇತರ ನಿವಾಸಿಗಳು ಪಾಲ್ಗೊಂಡಿದ್ದರು.