ಶನಿವಾರಸಂತೆ, ಅ. 26: ನೆಮ್ಮದಿ ಕೇಂದ್ರ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಚೆಕ್‍ಬಂದಿ ಸರಿಯಿಲ್ಲ. ಆದಾಯ ದೃಢೀಕರಣ ಪತ್ರ ದೊರೆಯುತ್ತಿಲ್ಲ. ವಿಧವಾ ವೇತನ ಬರಲಿಲ್ಲ. 4 ವರ್ಷವಾದರೂ ವಾಣಿಜ್ಯ ಸಂಕೀರ್ಣ ವಿವಾದ ಬಗೆಹರಿದಿಲ್ಲ. ಮಳೆ ಹಾನಿ ಪರಿಹಾರ ತಡವಾಗಿದೆ. ಮಧ್ಯಪೇಟೆಯ ನ್ಯಾಯಬೆಲೆ ಅಂಗಡಿ ಮುಚ್ಚಿ 5 ತಿಂಗಳಾಯಿತು. ಪಾರ್ಕಿಂಗ್ ವ್ಯವಸ್ಥೆ ಸರಿಯಿಲ್ಲ.

ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕೇಳಿಬಂದ ಗ್ರಾಮಸ್ಥರ ದೂರುಗಳಿವು. ಗ್ರಾಮಸ್ಥರಾದ ಎಸ್.ಸಿ. ಶರತ್ ಶೇಖರ್, ಜಗದೀಶ್, ಸ್ನೇಕ್ ನಾಗ, ದಿವಾಕರ್, ಬಾನು ರಿಜ್ವಾನ್, ಬಿ.ಕೆ. ಚಂದ್ರು, ಮಹಮ್ಮದ್ ಪಾಶ, ರಂಗಸ್ವಾಮಿ, ಚಂದ್ರಶೇಖರ್ ಮತ್ತಿತರರು ಸಮಸ್ಯೆಗಳ ಸರಮಾಲೆಯನ್ನೇ ಸಭೆಯ ಮುಂದೆ ತೆರೆದಿಟ್ಟರು.

ಮಳೆಯಿಂದ ಪಟ್ಟಣ ಮುಖ್ಯ ರಸ್ತೆ, ಬೈಪಾಸ್ ರಸ್ತೆ, ಕಾನ್ವೆಂಟ್ ರಸ್ತೆಗಳು ಹಾನಿಗೀಡಾಗಿವೆ. ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ. 4 ಟ್ಯಾಂಕುಗಳಿಂದ ನೀರು ಸೋರುತ್ತಿದೆ. ಪ್ರಾಪರ್ಟಿ ಕಾರ್ಡ್ ದೊರೆಯುತ್ತಿಲ್ಲ. ಹೈಮಾಸ್ಟ್ ದೀಪ ಸರಿಪಡಿಸಿ. ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಗ್ರಾಮಸ್ಥರು ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮುಂದೆ ಅಹವಾಲು ಮಂಡಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸೂಚಿಸುತ್ತಾ ಸರಕಾರದ ಯೋಜನೆಗಳು, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್ ಮಾತನಾಡಿ, ಸೀಮಿತ ಕೆಲಸಕ್ಕೆ ಅನುದಾನ ಮೀಸಲಿಡಲಾಗುವದು. ಶಾಸಕರ ಮುಖಾಂತರ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವದು. ಆಸ್ಪತ್ರೆ ಸಮಸ್ಯೆ ಬಗೆಹರಿಸಲಾಗುವದು. ರಸ್ತೆ ದುರಸ್ತಿ, ಅಂಬೇಡ್ಕರ್ ಭವನ ನಿರ್ಮಾಣ ಇತ್ಯಾದಿಗಳಿಗೆ ರೂ. 2.65 ಲಕ್ಷ ಮೀಸಲಿಡಲಾಗಿದೆ ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ವಾಣಿಜ್ಯ ಸಂಕೀರ್ಣ ವಿವಾದ ಬಗೆಹರಿಯದೇ ಪಂಚಾಯಿತಿಗೆ ವರ್ಷಕ್ಕೆ ರೂ. 3-4 ಲಕ್ಷ ವ್ಯರ್ಥವಾಗುತ್ತಿದೆ. ಮುಚ್ಚಲ್ಪಟ್ಟಿರುವ ನ್ಯಾಯಬೆಲೆ ಅಂಗಡಿ, ಕಾಳಸಂತೆ ಅವ್ಯವಹಾರದ ಬಗ್ಗೆ ದೂರು ಸಲ್ಲಿಸಿ ಪರಿಹರಿಸಿಕೊಳ್ಳಬೇಕು. ನೆನೆಗುದಿಗೆ ಬಿದ್ದಿರುವ ಕಸ ವಿಲೇವಾರಿ ಸಮಸ್ಯೆಯನ್ನು ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬಗೆಹರಿಸಿ ಕೊಳ್ಳಬೇಕು. ರಸ್ತೆ ಅಗಲೀಕರಣವೇ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಎಂದರು. ಪಿ.ಎಸ್.ಐ. ಎಂ.ಹೆಚ್. ಮರಿಸ್ವಾಮಿ ಮಾತನಾಡಿ, ‘ನಮ್ಮ ಹೊಣೆ-ನಮ್ಮ ಗ್ರಾಮ ಯೋಜನೆ’ ಎಂಬ ಯೋಜನೆಯಡಿ ಪೊಲೀಸ್ ಇಲಾಖೆ ಗ್ರಾಮ ಪಂಚಾಯಿತಿಗೆ ಪೂರ್ಣ ಸಹಕಾರ ನೀಡುವದು ಎಂದು ಹೇಳಿದರೆ ಪಂಚಾಯಿತಿ ಸದಸ್ಯ ಆದಿತ್ಯ ಗೌಡ, ವಾಣಿಜ್ಯ ಸಂಕೀರ್ಣ ಮಳಿಗೆ ತೆರವುಗೊಳಿಸುವದೇ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ, ಕಾರು ನಿಲ್ದಾಣ ಸ್ಥಳಾಂತರಗೊಂಡರೆ ಖಾಸಗಿ ಬಸ್‍ಗಳ ಪಾರ್ಕಿಂಗ್‍ಗೆ ವ್ಯವಸ್ಥೆಯಾಗುವದು ಎಂದು ಸಲಹೆ ನೀಡಿದರು.

ನೋಡೆಲ್ ಅಧಿಕಾರಿ ಕ್ಷೇತ್ರ ಸಮನ್ವಯ ಅಧಿಕಾರಿ ಶಶಿಧರ್ ಮಾತನಾಡಿ, ಗ್ರಾಮಸಭೆಯಲ್ಲಿ ಇಲಾಖಾಧಿಕಾರಿಗಳ ಉಪಸ್ಥಿತಿ ಕಡ್ಡಾಯ. ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳು ಸ್ಥಳದಲ್ಲೇ ಲಭ್ಯವಿರುವದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಹೆಚ್. ಮಹಮ್ಮದ್ ಗೌಸ್ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಅನುದಾನಕ್ಕೆ ತಕ್ಕಂತೆ ನಡೆಯುತ್ತಿದ್ದು, ರೂ. 25 ಲಕ್ಷ ವೆಚ್ಚದ ಕೆಲಸ ನಡೆದಿದೆ. 14ನೇ ಹಣಕಾಸು ಯೋಜನೆಯಡಿ ರೂ. 10 ಲಕ್ಷದ ಕೆಲಸ ನಡೆಯುವದು. ಜಾಗ ಅವೈಜ್ಞಾನಿಕವಾಗಿರುವದರಿಂದ ವಾಣಿಜ್ಯ ಸಂಕೀರ್ಣ ವಿವಾದವನ್ನು ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳಬೇಕಿದೆ. ಪ್ರಸ್ತುತ ಇಒ ಕೋರ್ಟಿನಲ್ಲಿದ್ದು, ಶೀಘ್ರ ಬಗೆಹರಿಸಲಾಗುವದು ಎಂದರು.

ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸರ್ದಾರ್ ಅಹಮ್ಮದ್, ಆದಿತ್ಯ ಗೌಡ, ಹರೀಶ್, ಪಾಂಡು, ಉಷಾ, ಹೇಮಾ, ರಜನಿ, ಸೌಭಾಗ್ಯ, ಪಿ.ಡಿ.ಓ. ಧನಂಜಯ, ಕಾರ್ಯದರ್ಶಿ ತಮ್ಮಯ್ಯಾಚಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.