ಹಣ ವಿಳಂಬದಿಂದ ಇನ್ನುಳಿದ ಮನೆಗಳ ಕಾಮಗಾರಿ ನಿಧಾನ

ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ.

528 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಮೂರು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂರಾಗದೆ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿ, ಆಗದ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಗೋಡೆ ಕಟ್ಟುವ ಕಾಮಗಾರಿಯ ಮೂಲಕ ಪ್ರಾರಂಭಗೊಂಡು ಮನೆಗಳಿಗೆ ಕಿಟಕಿ, ಬಾಗಿಲು, ಮೇಲ್ಚಾವಣಿ, ವಿದ್ಯುತ್, ನೆಲ ಹಾಸು ಹಾಕುವ ಮೂಲಕ 470ಕ್ಕೂ ಹೆಚ್ಚು ಮನೆಗಳ ಕಾಮಗಾರಿ ಸಂಪೂರ್ಣಗೊಂಡಿದೆ.

ಸರ್ಕಾರದ ಆದೇಶವಿದ್ದರೂ ಕಾಮಗಾರಿ ನಡೆಸಲು ಅನುಮೋದನೆ ಇನ್ನೂ ಕುಂಠಿತಗೊಂಡೇ ಸಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ ಸರ್ಕಾರ ಆದೇಶಿಸಿದ್ದ ರೂ. 3.5 ಲಕ್ಷದಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಈಗಿನ ಕಾಮಗಾರಿ ಅನುಮೋದನೆಯು ಸರ್ಕಾರಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿರುವದು ರೂ. 4.70 ಲಕ್ಷ ಆಗಿದೆ. ಇದರಲ್ಲಿ ಜಿಎಸ್‍ಟಿಯೂ ಸೇರಿದೆ. ಕಾಮಗಾರಿಯ ಅನುಮೋದನೆಯು ಕುಂಠಿತವಾಗಿರುವದರಿಂದ ಸರ್ಕಾರದಿಂದ ಹಂತ ಹಂತವಾಗಿ ಬರಬೇಕಿದ್ದ ಹಣ ಸಮರ್ಪಕವಾಗಿ ಬರದಿದ್ದರೂ ನಿರ್ಮಿತಿ ಕೇಂದ್ರದವರು ಈಗಾಗಲೇ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಲು ಸಿದ್ಧತೆ ಮಾಡುತ್ತಿದ್ದಾರೆ.

ದಿಡ್ಡಳ್ಳಿಯಿಂದ ನಿರಾಶ್ರಿತರನ್ನು ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಕೇಂದ್ರಕ್ಕೆ ಕರೆತಂದು ತಾತ್ಕಾಲಿಕ ಶೆಡ್ ನಿರ್ಮಿಸಿ, ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿತ್ತು. ಅದರಂತೆ ನಿರ್ಮಿತಿ ಕೇಂದ್ರದವರಿಗೆ ಗುತ್ತಿಗೆಯ ಆಧಾರದ ಮೇಲೆ ಕಾಮಗಾರಿಯನ್ನು ವಹಿಸಲಾಗಿ, ಕಾಮಗಾರಿಯಲ್ಲಿ ಶೇ. 85ರಷ್ಟು ಪೂರ್ಣಗೊಳಿಸುವ ಜೊತೆಗೆ 475 ಮನೆಗಳನ್ನು ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಹಸ್ತಾಂತರಿಸಲು ಸಿದ್ಧತೆ ಮಾಡಿದ್ದಾರೆ. ಆದರೆ, ಪುನರ್ವಸತಿ ಕೇಂದ್ರಕ್ಕೆ ಇನ್ನೂ ಸಮರ್ಪಕವಾದ ರಸ್ತೆ, ವಿದ್ಯುತ್ ಅಳವಡಿಕೆ, ಒಳಚರಂಡಿ ವ್ಯವಸ್ಥೆಗಳ ಬಗ್ಗೆ ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದರೂ ಹಣ ಬಿಡುಗಡೆಯಾಗದೆ ಇನ್ನೂ ಯಾವದೇ ಕಾಮಗಾರಿ ಕೈಗೊಂಡಿಲ್ಲ ಎಂಬದು ಸ್ಥಳೀಯ ನಿವಾಸಿಗಳ ಆರೋಪ. ಈಗಾಗಲೇ ರಾಜ್ಯ ಸರ್ಕಾರವು ನಿರ್ಮಿತಿ ಕೇಂದ್ರದ ಮೂಲಕ ಅಂದಾಜು ವೆಚ್ಚ ರೂ. 20 ಕೋಟಿ ಹಣದಲ್ಲಿ ರೂ. 14 ಕೋಟಿ ಮಾತ್ರ ಬಿಡುಗಡೆ ಮಾಡಿರುವದು ತಿಳಿದು ಬಂದಿದೆ. ಇನ್ನೂ ಸರ್ಕಾರದಿಂದ ಸಂಬಂಧಪಟ್ಟ ಇಲಾಖೆಗೆ ರೂ. 6 ಕೋಟಿ ಬಿಡುಗಡೆಯಾಗಬೇಕಿದೆ. ಹಣ ಬಿಡುಗಡೆಯಾಗುವದನ್ನು ಕಾಯದೆ ನಿರ್ಮಿತಿ ಕೇಂದ್ರದ ವತಿಯಿಂದ ಈಗಾಗಲೇ ಗುತ್ತಿಗೆದಾರರ ಮೂಲಕ ಕಾಮಗಾರಿ ಪ್ರಗತಿಯತ್ತ ಸಾಗುತ್ತಿದೆ. ಇನ್ನುಳಿದ 53 ಮನೆಗಳ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯವರು ತಾತ್ಕಾಲಿಕ ಶೆಡ್‍ನಲ್ಲಿರುವ ಕುಟುಂಬದವರನ್ನು ಹಾಗೂ ಶಾಶ್ವತ ಮನೆ ನಿರ್ಮಾಣ ಮಾಡಲು ಗುರುತಿಸಿರುವ ಜಾಗದಲ್ಲಿರುವವರನ್ನು ಪಕ್ಕಕ್ಕೆ ಸ್ಥಳಾಂತರ ಮಾಡಿದ ತಕ್ಷಣ ಇನ್ನುಳಿದ ಮನೆಗಳ ಕಾಮಗಾರಿಯನ್ನು ನಡೆಸಲಾಗುವದು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯವರು ತುರ್ತಾಗಿ ಸಿದ್ಧಗೊಂಡಿರುವ ಮನೆಗಳನ್ನು ಹಸ್ತಾಂತರಿಸುವ ಹಾಗೂ ಅನುಮೋದನೆ ಕಾರ್ಯಚಟುವಟಿಕೆಯಲ್ಲಿ ತಲ್ಲೀನರಾಗಬೇಕು. ಈಗಾಗಲೇ ಸಿದ್ಧಗೊಂಡಿರುವ ಮನೆಗಳಿಗೆ ವಿದ್ಯುತ್ ಅಳವಡಿಸಿದ ತಕ್ಷಣ ಫಲಾನುಭವಿಗಳಿಗೆ ಹಸ್ತಾಂತರಿಸಲು ಮುಂದಿನ ತಿಂಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಕೇಂದ್ರ ಆದಿವಾಸಿ ಮುಖಂಡರು ಈ ಮೂಲಕ ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜ ಶೆಟ್ಟಿ.