ಸೋಮವಾರಪೇಟೆ, ಅ. 26: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ ಆಗಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ದಿನಗಳಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಸಲಹೆ ಸೂಚನೆ ನೀಡಿದರು.

ಎಲ್ಲಾ ರಾಜಕೀಯ ಪಕ್ಷಗಳ ಈವರೆಗಿನ ಆಡಳಿತಕ್ಕೆ ತೃಪ್ತಿ ವ್ಯಕ್ತಪಡಿಸದ ಸಂಘ ಸಂಸ್ಥೆಗಳ ಪ್ರಮುಖರು, ಮುಂದಿನ ದಿನಗಳಲ್ಲಾದರೂ ಪಟ್ಟಣದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ರಾಜಕೀಯ ಕಿತ್ತಾಟಗಳನ್ನು ಬದಿಗಿಟ್ಟು ಒಂದಾಗಿ ಕೆಲಸ ಮಾಡಿ ಎಂದು ಸಲಹೆಯನ್ನಿತ್ತರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ನಗರ ಪತ್ರಕರ್ತರ ಸಂಘ ಮತ್ತು ಪತ್ರಿಕಾಭವನ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಪತ್ರಿಕಾಭವನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪಟ್ಟಣ ಪಂಚಾಯಿತಿ ಚುನಾವಣೆ-ರಾಜಕೀಯ ಪಕ್ಷಗಳ ದೃಷ್ಟಿಕೋನ’ ವಿಷಯದ ಬಗೆಗಿನ ಸಂವಾದ ಕಾರ್ಯಕ್ರಮದಲ್ಲಿ ಹಲವಷ್ಟು ಆರೋಪ, ಟೀಕೆಗಳು, ಸಲಹೆಗಳು ಕೇಳಿಬಂದವು.

ಪಟ್ಟಣದಲ್ಲಿ ಜ್ವಲಂತವಾಗಿರುವ ತ್ಯಾಜ್ಯವಿಲೇವಾರಿ, ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವದು, ಪಾರ್ಕಿಂಗ್ ಸಮಸ್ಯೆ, ವೃತ್ತಿಪರ ವಿದ್ಯಾಸಂಸ್ಥೆಗಳ ಕೊರತೆ, ಹೈಟೆಕ್ ಮಾರುಕಟ್ಟೆ ಅವ್ಯವಸ್ಥೆ ಸೇರಿದಂತೆ ಇತರ ಸಮಸ್ಯೆಗಳು ಸಂವಾದದಲ್ಲಿ ಪ್ರತಿಧ್ವನಿಸಿದವು.

ವಾಣಿಜ್ಯ ಮಳಿಗೆಗಳ ಪರಭಾರೆ ಸಮರ್ಪಕವಾಗಿ ನಡೆದಿಲ್ಲ. ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿದಿಲ್ಲ. ವೃತ್ತಿಪರ ಕಾಲೇಜುಗಳು ಇಲ್ಲಿಲ್ಲ. ವಾರ್ಡ್ ಸಭೆಗಳೇ ನಡೆದಿಲ್ಲ. ಈವರೆಗೆ ಗೆದ್ದುಬಂದವರಿಗೆ ಸಾಮಾಜಿಕ ಬದ್ಧತೆಯೇ ಇಲ್ಲ ಎಂದು ಕರವೇ ಪದಾಧಿಕಾರಿಗಳಾದ ಮಂಜುನಾಥ್ ಮತ್ತು ರವೀಶ್ ಅವರು ರಾಜಕೀಯ ಪಕ್ಷಗಳ ಮುಖಂಡರನ್ನು ತೀಕ್ಷ್ಣವಾಗಿ ತಿವಿದರು.

ಕಳೆದ 22 ವರ್ಷಗಳಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಜೆಡಿಎಸ್ ಅಧ್ಯಕ್ಷ ಜಯಾನಂದ ಆರೋಪಿಸಿದರು. ಮೈತ್ರಿ ಸರ್ಕಾರ ಆಡಳಿತಕ್ಕೆ ಬರಲಿದ್ದು, ಅಭಿವೃದ್ಧಿ ಮಾಡುತ್ತೇವೆ ಎಂದು ಕಾಂಗ್ರೆಸ್‍ನ ರಮೇಶ್ ಹೇಳಿದರು. ಹೈಟೆಕ್ ಮಾರುಕಟ್ಟೆ, ಕಾಂಕ್ರೀಟ್ ರಸ್ತೆ, ನಿವೇಶನ ವಿತರಣೆ, ಕುಡಿಯುವ ನೀರು ಪೂರೈಕೆ, ಉದ್ಯಾನವನ ನಿರ್ಮಾಣ, ವಾಣಿಜ್ಯ ಮಳಿಗೆಗಳನ್ನು ಬಿಜೆಪಿ ಸರ್ಕಾರವಿದ್ದಾಗಲೇ ಮಾಡಿದ್ದು ಎಂದು ಬಿಜೆಪಿಯ ಸೋಮೇಶ್ ಹೇಳಿದರು.

ಚುನಾವಣೆ ಸಂದರ್ಭ ಮಾತ್ರ ಹಣ, ಹೆಂಡ ಹಂಚಿಕೆ ಮಾಡಿ ಪಾರ್ಟಿ ನಡೆಸುತ್ತಾರೆ. ನಮ್ಮ ಮನೆಗೆ ನೀಡಿದ ಹಣವನ್ನು ಅಭ್ಯರ್ಥಿಗೇ ವಾಪಸ್ ನೀಡಿದ್ದೇವೆ ಎಂದು ಕರವೇ ನಗರಾಧ್ಯಕ್ಷ ಮಂಜುನಾಥ್ ಅವರು, ಚುನಾವಣಾ ರಾಜಕೀಯದ ಒಳಮರ್ಮವನ್ನು ಹೊರಹಾಕಿದರು. ಅಭ್ಯರ್ಥಿಗಳ ಯಾವದೇ ಆಮಿಷಗಳಿಗೆ ಮತದಾರರು ಒಳಗಾಗಬಾರದು ಎಂದು ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್ ತಿಳಿ ಹೇಳಿದರು.

ಪ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ನಿವೇಶನಗಳ ವಿತರಣೆಯಲ್ಲಿ ಅವ್ಯವಹಾರವಾಗಿದೆ. ಪಟ್ಟಣದ ಪಾರ್ಕಿಂಗ್ ಸಮಸ್ಯೆಯೂ ಬಗೆಹರಿದಿಲ್ಲ ಎಂದು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಮತ್ತು ರಫೀಕ್ ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಬಡ ಫಲಾನುಭವಿಗಳಿಂದ ಹಣ ಪಡೆಯದೇ ಉಚಿತವಾಗಿ ನಿವೇಶನ ವಿತರಿಸಲಾಗಿದೆ ಎಂದು ಸೋಮೇಶ್ ಸಮರ್ಥಿಸಿಕೊಂಡರು.

ಪಟ್ಟಣದ ಆನೇಕೆರೆಯ ತಡೆಗೋಡೆ ಅವನತಿಯ ಹಾದಿಯಲ್ಲಿದೆ. ಬೀಡಾಡಿ ಜಾನುವಾರು-ನಾಯಿಗಳ ಹಾವಳಿ ಮಿತಿಮೀರಿದೆ. ಖಾಲಿ ಉಳಿದಿರುವ ನಿವೇಶಗಳಲ್ಲಿ ಕಾಡು ಬೆಳೆದಿದೆ ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ ಹೇಳಿದರು. ಜಾತಿ ಆಧಾರದಲ್ಲಿ ಟಿಕೇಟ್ ನೀಡಿರುವದು ಎಷ್ಟು ಸರಿ? ಎಂದು ಎಂ.ಎ. ರುಬೀನಾ ಪ್ರಶ್ನಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಮಂದಿಗೆ ಪ.ಪಂ.ನಿಂದ ನಿರೀಕ್ಷಿತ ಮಟ್ಟದಲ್ಲಿ ಸವಲತ್ತು ಲಭಿಸಿಲ್ಲ ಎಂದು ಎಸ್.ಆರ್. ವಸಂತ್ ಹಾಗೂ ಅಬ್ಬಾಸ್ ಅವರುಗಳು ರಾಜಕೀಯ ಪಕ್ಷಗಳ ಮುಖಂಡರ ಎದುರು ಆರೋಪಿಸಿದರು.

ಅಭ್ಯರ್ಥಿಗಳು ಗೆದ್ದನಂತರ ರಾಜಕೀಯ ಪಕ್ಷಗಳು ಅವರ ಕಾರ್ಯಚಟುವಟಿಕೆಯ ಮೇಲೆ ಗಮನ ಹರಿಸಬೇಕು. ವಾರ್ಡ್ ಸಭೆಗಳನ್ನು ನಡೆಸುವಂತೆ ಸೂಚಿಸಬೇಕು. ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಂತೆ ಬುದ್ದಿವಾದ ಹೇಳಬೇಕು ಎಂದು ಹಲವಷ್ಟು ಮಂದಿ ತಿಳಿ ಹೇಳಿದರು.

ಪಟ್ಟಣದಲ್ಲಿದ್ದ ಆಯುರ್ವೇದಿಕ್ ಆಸ್ಪತ್ರೆ ಮತ್ತು ಟಿಸಿಹೆಚ್ ಕಾಲೇಜು ಎತ್ತಂಗಡಿಗೆ ಯಾರು ಹೊಣೆ ಎಂದು ಬಿ.ಎ. ಭಾಸ್ಕರ್ ಪ್ರಶ್ನಿಸಿದ ಸಂದರ್ಭ ಮೂರೂ ರಾಜಕೀಯ ಪಕ್ಷಗಳ ಮುಖಂಡರಿಂದ ಸಮರ್ಪಕ ಉತ್ತರ ಬರಲಿಲ್ಲ. ಪಟ್ಟಣದ ಸಮಸ್ಯೆಗಳು ಕೇವಲ ಪತ್ರಕರ್ತರು ಹಾಗೂ ಸಂಘಟನೆಯವರಿಗೆ ಮಾತ್ರ ಕಾಣಿಸುತ್ತದೆ. ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜನಪ್ರತಿನಿಧಿಗಳ ಕಣ್ಣಿಗೆ ಏಕೆ ಕಾಣಿಸುವದಿಲ್ಲ ಎಂದು ಮಂಜುನಾಥ್ ಪ್ರಶ್ನಿಸಿದ ಸಂದರ್ಭವೂ ಮುಖಂಡರು ಮೌನಕ್ಕೆ ಶರಣಾದರು.

ಪಟ್ಟಣದ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಸಾರ್ವಜನಿಕ ಸ್ಮಶಾನದಲ್ಲಿ ಶವಾಗಾರ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವದು. ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಯೋಜನೆ ಅನುಷ್ಠಾನಗೊಳಿಸಲು ರೋಟರಿಯಿಂದ ಶ್ರಮಿಸಲಾಗುವದು. ರಾಜಕೀಯ ಪಕ್ಷಗಳು ಈ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಅಧ್ಯಕ್ಷ ಪಿ.ಕೆ. ರವಿ ಮನವಿ ಮಾಡಿದರು.

ಉತ್ತಮ ಆಡಳಿತ ನೀಡುವ ಸಲುವಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಎನ್.ಎನ್. ರಮೇಶ್, ಜೆ.ಡಿ.ಎಸ್. ಅಧ್ಯಕ್ಷ ಜಯಾನಂದ ತಿಳಿಸಿದರೆ, ಸೋಲಿನ ಭೀತಿಯಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಆದರೂ ಈ ಹಿಂದಿನ ಅಭಿವೃದ್ಧಿ ಕಾಮಗಾರಿ, ಶಾಸಕರ ಜನಪರ ಕಾರ್ಯಗಳಿಂದ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಪಟ್ಟಣದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ ಎಂದು ಬಿಜೆಪಿಯ ಸೋಮೇಶ್ ಭರವಸೆ ವ್ಯಕ್ತಪಡಿಸಿದರು.

ಬಿಜೆಪಿಯ ಶರತ್‍ಚಂದ್ರ, ಕಾಂಗ್ರೆಸ್‍ನ ಹೆಚ್.ಸಿ. ನಾಗೇಶ್, ಜೆಡಿಎಸ್‍ನ ವಿಜು ಅವರುಗಳು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ವರ್ತಕರ ಸಂಘದ ಅಧ್ಯಕ್ಷ ಮನುಕುಮಾರ್ ರೈ, ಜೇಸೀ ಅಧ್ಯಕ್ಷ ಪ್ರಕಾಶ್, ಮೋಟಾರ್ ಯೂನಿಯನ್ ಅಧ್ಯಕ್ಷ ಸಿ.ಸಿ. ನಂದ ಸೇರಿದಂತೆ ಪತ್ರಕರ್ತರು ಸಂವಾದದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ವಹಿಸಿದ್ದರು. ನಗರಾಧ್ಯಕ್ಷ ಡಿ.ಪಿ. ಲೋಕೇಶ್ ಕಾರ್ಯಕ್ರಮ ಉದ್ಘಾಟಿಸಿದರೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ. ಮುರಳೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.