ಮಡಿಕೇರಿ, ಅ. 26: ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡಿರುವ ಪ್ರತಿ ಸಂತ್ರಸ್ತರ ಕುಟುಂಬಕ್ಕೆ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವದಲ್ಲದೆ, ಕಾಫಿ ಇತ್ಯಾದಿ ಕೃಷಿ ಹಾನಿಗೂ ಅಗತ್ಯ ಪರಿಹಾರ ನೀಡಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಭರವಸೆ ನೀಡಿದರು. ಮಕ್ಕಂದೂರು ಶಾಲಾ ಕಟ್ಟಡ ಭೂಮಿಪೂಜೆ ಕಾರ್ಯಕ್ರಮ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈಚೆಗೆ ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಒಂದು ಕೋಣೆಯ ಮನೆ ಬದಲಿಗೆ, ಎರಡು ಬೆಡ್ ರೂಂಗಳಿಂದ ಕೂಡಿದ ರೂ. 8.50 ಲಕ್ಷದ ಮನೆ ಹಾಗೂ 50 ಸಾವಿರ ಪೀಠೋಪಕರಣ ನೆರವು (ಮೊದಲ ಪುಟದಿಂದ) ಹಾಗೂ ರೂ. 1ಲಕ್ಷ ತುರ್ತು ಪರಿಹಾರ ಸೇರಿದಂತೆ ಪ್ರತಿ ಕುಟುಂಬಕ್ಕೆ ರೂ. 10 ಲಕ್ಷದ ಪರಿಹಾರ ಒದಗಿಸಲು ಆದೇಶಿಸಿದ್ದಾರೆ ಎಂದು ವಿವರಿಸಿದರು.ಕೇಂದ್ರ ಸರಕಾರದ ರಾಷ್ಟ್ರೀಯ ವಿಪತ್ತು ನಿಧಿ ಹಾಗೂ ಕೃಷಿ ನಷ್ಟ ಪರಿಹಾರ ಕೋರಿ ಈಚೆಗೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರಿಗೆ ಮನವರಿಕೆ ಮಾಡಿದ್ದು, ಅವರಿಂದ ಪೂರಕ ಸ್ಪಂದನ ಲಭಿಸಿದೆ ಎಂದ ಸಾ.ರಾ. ಮಹೇಶ್, ಜಿಲ್ಲೆಯ ಅಧಿಕಾರಿಗಳು, ಶಾಸಕರುಗಳ ಸಹಿತ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನತೆಗೆ ಕಷ್ಟ ನಿವಾರಿಸಲು ಎಲ್ಲಾ ಕ್ರಮ ವಹಿಸಲಿದೆ ಎಂದು ಆಶ್ವಾಸನೆ ನೀಡಿದರು.
ಶಾಲೆಗೂ ನೆರವು: ಮಕ್ಕಂದೂರುವಿನಲ್ಲಿ ಅಕ್ಕಾ ಬಳಗದಿಂದ ಶಾಲಾ ಕಟ್ಟಡ ನಿರ್ಮಾಣದೊಂದಿಗೆ, ಮೇಲ್ಮನೆ ಸದಸ್ಯ ಶರವಣ ಅವರು ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿದ್ದು, ರೇಷ್ಮೆ ಮಂಡಳಿಯಿಂದ ಮತ್ತೊಂದು ಕಟ್ಟಡ ಒದಗಿಸಲಾಗುವದು ಎಂದು ವಿವರಿಸಿದರು.
ಪ್ರಾಧಿಕಾರ ರಚನೆ: ಈಗಾಗಲೇ ಕೊಡಗು ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಜಿಲ್ಲೆಯ ಶಾಸಕರುಗಳ ಸಹಿತ ಎಲ್ಲರೂ ಒಗ್ಗೂಡಿ ಬೇಧಭಾವ ಮರೆತು ಜಿಲ್ಲೆಯ ಪುನರುತ್ಥಾನಕ್ಕೆ ಶ್ರಮಿಸುವದಾಗಿ ಸಚಿವರು ಘೋಷಿಸಿದರು. ನವೆಂಬರ್ 3ರ ಬಳಿಕ ಈ ಎಲ್ಲಾ ಕೆಲಸಗಳಿಗೆ ವೇಗದ ಚಾಲನೆ ನೀಡಲು ಮುಂದಾಗುವದಾಗಿ ಮಾರ್ನುಡಿದರು.