ಮಡಿಕೇರಿ, ಅ. 26: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಸುಮಾರು 130 ವಿದ್ಯಾರ್ಥಿಗಳಿಗೆ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾ ಸಂಸ್ಥೆ ಟ್ರಸ್ಟ್ ಹಾಗೂ ಸಾಯಿ ಶಂಕರ ವಿದ್ಯಾ ಸಂಸ್ಥೆಯ ವತಿಯಿಂದ ಮೂರು ವರ್ಷಗಳ ಕಾಲ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಈ ವಿದ್ಯಾರ್ಥಿಗಳನ್ನು ಮಾದರಿ ವಿದ್ಯಾರ್ಥಿಗಳನ್ನಾಗಿ ಮಾಡುವದು ಸಂಸ್ಥೆಯ ಗುರಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬದ 25 ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಗುರಿಯನ್ನು ತಮ್ಮ ಸಂಸ್ಥೆ ಹೊಂದಿತ್ತು. ಆದರೆ ದಾನಿಗಳು ನೀಡಿದ ಉದಾರ ಕೊಡುಗೆ ಹಾಗೂ ಹಣಕಾಸಿನ ನೆರವಿನಿಂದಾಗಿ ಪ್ರಸಕ್ತ 130 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ವಸತಿ, ಆಹಾರ ಮತ್ತು ಇನ್ನಿತರ ಸೌಲಭ್ಯಗಳನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು. ತಮ್ಮ ವಿದ್ಯಾಸಂಸ್ಥೆ ಸರಕಾರದ ಅನುದಾನ ರಹಿತ ಸಂಸ್ಥೆಯಾಗಿದ್ದು, ಓರ್ವ ವಿದ್ಯಾರ್ಥಿಗೆ ವಾರ್ಷಿಕ ಸುಮಾರು 95 ಸಾವಿರ ರೂ.ಗಳ ವೆಚ್ಚ ತಗಲುತ್ತದೆ. ಈ ವರ್ಷಕ್ಕೆ ದಾನಿಗಳು ಸ್ವಯಂಪ್ರೇರಣೆಯಿಂದ ಉದಾರವಾಗಿ ದಾನ ನೀಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕೂಡಾ ಇದೇ ರೀತಿಯ ನೆರವಿನ ಅಗತ್ಯವಿದೆ ಎಂದು ಹೇಳಿದ ಅವರು, ಸರಕಾರದಿಂದ ಮಕ್ಕಳಿಗೆ ಅಗತ್ಯವಿರುವ ಆಹಾರ ಧಾನ್ಯ, ಗ್ಯಾಸ್, ಹಾಲು ಮುಂತಾದ ವಸ್ತುಗಳನ್ನು ನೀಡಿದಲ್ಲಿ ಮತ್ತಷ್ಟು ಪ್ರಯೋಜನ ವಾಗಲಿದೆ ಎಂದು ನುಡಿದರು.

ಈ ವರ್ಷ ತಾವಾಗಿ ಯಾರಿಂದಲೂ ದೇಣಿಗೆ ಸಂಗ್ರಹಿಸಿಲ್ಲ. ದಾನಿಗಳೇ ನೇರವಾಗಿ ಸಂಸ್ಥೆಯ ಖಾತೆಗೆ ಹಣ ಸಂದಾಯ ಮಾಡಿದ್ದಾರೆ. ಅನೇಕರು ವಿವಿಧ ವಸ್ತುಗಳ ರೂಪದಲ್ಲಿ ನೆರವು ನೀಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ನೊಂದ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆಯುವದರೊಂದಿಗೆ ಐಎಎಸ್, ಐಪಿಎಸ್‍ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಪ್ರಜೆಗಳಾಗುವಂತೆ ಮಾಡುವದು ತಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಸರಕಾರವೂ ನಮಗೆ ಸ್ಪಂದಿಸುವಂತಾಗಬೇಕು ಎಂದು ಕೋರಿದರು.

ಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಅರಮಣಮಾಡ ಸತೀಶ್ ದೇವಯ್ಯ, ಗಣೇಶ್ ಪೊನ್ನಪ್ಪ ಹಾಗೂ ಬಿ.ಇಡಿ ಕಾಲೇಜು ಪ್ರಾಧ್ಯಾಪಕ ಟಿ.ಕೆ. ತಿಮ್ಮಯ್ಯ ಉಪಸ್ಥಿತರಿದ್ದರು.