ಮಡಿಕೇರಿ, ಅ. 27: ಪ್ರಸಕ್ತ ಸಾಲಿನಲ್ಲಿ ಅಂಚೆ ಮೂಲಕ ಕನ್ನಡ ಶಿಕ್ಷಣದ 33ನೇ ತಂಡದ ತರಬೇತಿಯನ್ನು ನವೆಂಬರ್ 1 ರಿಂದ ಆರಂಭಿಸಲಿದ್ದು, ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. 30 ಕೊನೆ ದಿನವಾಗಿದೆ.

ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಈ ಎರಡೂ ಸಂಸ್ಥೆಗಳು ಒಟ್ಟಾಗಿ ನವೆಂಬರ್ 1 ರಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲಾ ಸರ್ಕಾರಿ ನೌಕರರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸುತ್ತಿದೆ.

ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲಾ ನಗರಸಭೆ, ಕ.ವಿ.ಪ್ರ.ನಿ.ನಿ., ಕೆ.ಎಸ್.ಆರ್.ಟಿ.ಸಿ., ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೋಂದಾಯಿಸಿಕೊಳ್ಳಬಹುದು. ನೋಂದಣಿಯ ಶುಲ್ಕ ಕೊಡಬೇಕಾಗಿಲ್ಲ.

ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ. ಇವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 50 ವಯಸ್ಸಿನ ಒಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ ರೂ. 250 ಡಿಮ್ಯಾಂಡ್ ಡ್ರಾಫ್ಟ್‍ನ್ನು ಕಳುಹಿಸಿಕೊಡಬೇಕು. ನೋಂದಣಿಯಾದವರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವದು.

33ನೇ ತಂಡದ ತರಬೇತಿಯು 2018ರ ನವೆಂಬರ್ 1 ರಿಂದ ಆರಂಭವಾಗಲಿದೆ. ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಬಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006. ದೂ. 0821-2345128 ಇವರಿಗೆ ರೂ. 5 ಅಂಚೆ ಚೀಟಿಯನ್ನು ಹಚ್ಚಿದ ಸ್ವವಿಳಾಸ ಲಕೋಟೆಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪ್ರಬಾರಿ ಅಧಿಕಾರಿಯವರಿಗೆ ತಾ. 31 ರೊಳಗೆ ತಲಪಬೇಕು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.