ಮಡಿಕೇರಿ, ಅ. 27: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತರನ್ನು ಸರಕಾರ ಕಡೆಗಣಿಸಿರುವದರಿಂದ ಇವರ ಬದುಕು ಅಕ್ಷರಶಃ ಬೀದಿ ಪಾಲಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ತಾಲೂಕಿನಲ್ಲಿ ಸಂಭವಿಸಿರುವ ಮಳೆಹಾನಿ ಮತ್ತು ಸರಕಾದ ನಿರ್ಲಕ್ಷ್ಯದ ಬಗ್ಗೆ ದಕ್ಷಿಣ ಕೊಡಗಿನಲ್ಲಿ ಜನಜಾಗೃತಿ ಮೂಡಿಸುವದಕ್ಕಾಗಿ ತಾ. 29 ರಂದು ಬೆಳಿಗ್ಗೆ 10.30ಕ್ಕೆ ಗೋಣಿಕೊಪ್ಪ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸುವದಾಗಿ ತಿಳಿಸಿದರು.

ಸಂತ್ರಸ್ತರು ಜೀವಂತ ಶವದಂತಿದ್ದರೂ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ನಾಚಪ್ಪ, ಕೊಡಗನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದರೆ ಕೇವಲ ಒಂದೇ ವರ್ಷದಲ್ಲಿ ಸಂತ್ರಸ್ತರಿಗೆ ಶಾಶ್ವ್ವತ ಪುನರ್ವಸತಿ ಕಲ್ಪಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಸರಕಾರ ಮನಸ್ಸು ಮಾಡಿದರೆ ಕೇವಲ 24 ಗಂಟೆಗಳಲ್ಲಿ ನೈಜ ಸಂತ್ರಸ್ತರ ಮಾಹಿತಿ ಮತ್ತು ದಾಖಲೆಯನ್ನು ಸಂಗ್ರಹಿಸಿ ಆಯಕಟ್ಟಿನ ಜಾಗದಲ್ಲಿ ಪುನರ್ವಸತಿ ಕಲ್ಪಿಸಬಹುದಾಗಿದೆ. ಆದರೆ ಘಟನೆ ನಡೆದು ಮೂರು ತಿಂಗಳು ಸಮೀಪಿಸಿದರು ಸಂತ್ರಸ್ತರು ಭಿಕ್ಷುಕರಂತೆ ಪರಿಹಾರಕ್ಕಾಗಿ ಅಲೆದಾಡಬೇಕಾಗಿದೆ. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ರೊಹಿಂಗ್ಯಾಗಳಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಚುರುಕಾಗಿದೆ ಎಂದು ಆರೋಪಿಸಿದ ಅವರು ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಜನಜಾಗೃತರಾಗಬೇಕಾಗಿದೆ ಎಂದರು.

ಪರಿಹಾರದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಆಡಳಿತ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಎದುರಾಗಿದೆ. ಸರಕಾರಕ್ಕೆ ಕೊಡಗಿನ ಪ್ರಾಕೃತಿಕ ಸಂಪನ್ಮೂಲ, ಆದಾಯ ಮತ್ತು ಯೋಧ ಪರಂಪರೆಯ ಮಾನವ ಸಂಪನ್ಮೂಲ ಮಾತ್ರ ಬೇಕಾಗಿದೆ. ಆದರೆ ಅತಿವೃಷ್ಟಿ ಹಾನಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರವನ್ನು ಪ್ರತಿಯೊಬ್ಬ ಸಂತ್ರಸ್ತರ ಮನೆ ಬಾಗಿಲಿಗೆ ತಲಪಿಸುವ ಉದಾರತೆಯನ್ನು ಸರಕಾರ ತೋರಿಲ್ಲವೆಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಾ ವಿಕೋಪಗಳಿಗೆ ಕಾರಣವಾಗಿರುವ ಹಾರಂಗಿ ಜಲಾಶಯವನ್ನು ಮೊದಲು ತೆರವುಗೊಳಿಸಬೇಕೆಂದು ಅವರು ಇದೇ ಸಂದರ್ಭ ಒತ್ತಾಯಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಪುಲ್ಲೇರ ಕಾಳಪ್ಪ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.