ಸೋಮವಾರಪೇಟೆ, ಅ. 27: ರೋಟರಿ ಸಂಸ್ಥೆಯ ವತಿಯಿಂದ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಚಿಸಲಾಗಿರುವ ರೋಟರ್ಯಾಕ್ಟ್ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ, ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಧರ್ಮಪುರಿ ನಾರಾಯಣ್, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ರೋಟರ್ಯಾಕ್ಟ್ ಸಂಸ್ಥೆ ಉತ್ತಮ ವೇದಿಕೆಯಾಗಿದೆ ಎಂದರು.
ಕಾರ್ಯದರ್ಶಿ ಕ್ರಜ್ವಲ್ ಕೋಟ್ಸ್ ಮಾತನಾಡಿ, ಸಂಸ್ಥೆಯ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವದರಿಂದ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ ಮಾತನಾಡಿ, ಶಾಲೆಗಳಲ್ಲಿ ರೋಟರ್ಯಾಕ್ಟ್ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಗಾನ ಮತ್ತು ಕಾರ್ಯದರ್ಶಿ ಲಿಖಿತರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ನಾಗೇಶ್, ಶಾಲಾ ಮುಖ್ಯ ಶಿಕ್ಷಕ ಮಾರ್ಷಲ್ ಲೋಬೋ, ಯೋಜನಾಧಿಕಾರಿ ಲಿಖಿತ್, ಸಹಾಯಕ ಯೋಜನಾಧಿಕಾರಿ ಅರ್ಚನ ಉಪಸ್ಥಿತರಿದ್ದರು.