ಸೋಮವಾರಪೇಟೆ, ಅ. 27: ರೂ. 1.78 ಲಕ್ಷ ಮೌಲ್ಯದ ಶ್ರೀಗಂಧವನ್ನು ಶೇಖರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳ ತಂಡ, ಮೂವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಬಜೆಗುಂಡಿ ಗ್ರಾಮದ ನಿವಾಸಿ ಪಿ.ಕೆ. ಸುರೇಶ್ ಹಾಗೂ ಆತನ ಪುತ್ರ ಸುದೀಪ್ ಅಲಿಯಾಸ್ ಸುಧೀರ್, ಯಡವನಾಡು ಗ್ರಾಮದ ಎನ್.ಡಿ. ಹೇಮಕುಮಾರ್ ಬಂದಿತ ಆರೋಪಿಗಳಾಗಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಿದ ಮೇರೆ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಬೇರೆ ಬೇರೆ ಸ್ಥಳಗಳಿಂದ ಶ್ರೀಗಂಧವನ್ನು ಕಳ್ಳತನ ಮಾಡಿ, ಬಜೆಗುಂಡಿ ಗ್ರಾಮದ ಸುರೇಶ್ ಅವರ ಮನೆಯ ಸುತ್ತಮುತ್ತ ಬಚ್ಚಿಡಲಾಗಿತ್ತು. ಇಂದು ಬೆಳಿಗ್ಗೆ ಬೈಕ್‍ನಲ್ಲಿ ಶ್ರೀಗಂಧದ ಮೂರು ತುಂಡುಗಳನ್ನು ತಂದು, ಮಾರುತಿ ಓಮ್ನಿ ವ್ಯಾನ್‍ನಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ನೇತೃತ್ವದ ತಂಡ ಧಾಳಿ ನಡೆಸಿದೆ. ಮನೆಯ ಸುತ್ತಮುತ್ತ, ಮರಳಿನ ಒಳಗೆ ಬಚ್ಚಿಡಲಾಗಿದ್ದ ಸುಮಾರು 89 ಕೆ.ಜಿ. ಶ್ರೀಗಂಧವನ್ನು ಪತ್ತೆಹಚ್ಚಲಾಗಿದ್ದು, ಬೈಕ್ ಹಾಗೂ ಕಾರನ್ನು (ಕೆ.ಎ.12 ಎನ್.8807) ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಶೇಖರಿಸಿಟ್ಟಿದ್ದ ಶ್ರೀಗಂಧವನ್ನು ಗರಗಂದೂರು ಗ್ರಾಮದ ಬಾಪುಟ್ಟಿ ಎಂಬವರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಬಂದಿತ ಆರೋಪಿಗಳು ನೀಡಿದ ಹೇಳಿಕೆ ಯನ್ನಾಧರಿಸಿ, ಬಾಪುಟ್ಟಿ ಮೇಲೂ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಫಾರೆಸ್ಟರ್ ಚಂದ್ರೇಶ್, ಶ್ರೀಕಾಂತ್, ಚೇತನ್, ಚಾಲಕ ಚಂದ್ರು ಭಾಗವಹಿಸಿದ್ದರು. ಮೊನ್ನೆಯಷ್ಟೇ ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕರ ನೇತೃತ್ವದಲ್ಲಿ ಮಾದಾಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲೂ 10 ಕೆ.ಜಿ.ಯಷ್ಟು ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲೂ ಬಾಪುಟ್ಟಿಯ ಮೇಲೆ ಮೊಕದ್ದಮೆ ದಾಖಲಾಗಿದೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.