ಸಿದ್ದಾಪುರ, ಅ. 27: ಅಭ್ಯತ್‍ಮಂಗಲ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಾಲಚಂಡ ಅಚ್ಚಯ್ಯ (ಟುಟ್ಟು) ಆಯ್ಕೆಯಾಗಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಅಭ್ಯತ್‍ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಈ ಬಾರಿ ನಿರ್ದೇಶಕರ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿತ್ತು. ಎರಡು ತಂಡಗಳು ತೀವ್ರ ಪೈಪೋಟಿಗಳ ನಡುವೆ ಅತ್ಯಾಧಿಕ ಸ್ಥಾನಗಳನ್ನು ಗಳಿಸಿ ಬಿ.ಜೆ.ಪಿ. ಪಕ್ಷದ ಬೆಂಬಲಿತ ನಿರ್ದೇಶಕರುಗಳು ಆಯ್ಕೆಯಾದರು.

ವಿರೋಧ ಪಕ್ಷದ ತಂಡದಲ್ಲಿ ಓರ್ವ ನಿರ್ದೇಶಕರು ಮಾತ್ರ ಆಯ್ಕೆಯಾಗಿದ್ದರು. ಶುಕ್ರವಾರದಂದು ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪಾಲಚಂಡ ಅಚ್ಚಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಸಂತ ಕುಮಾರ್ ಹೊಸಮನೆ ಆಯ್ಕೆಯಾದರು. ನಿರ್ದೇಶಕರಾಗಿ ಕೆದಂಬಾಡಿ ಪ್ರಸನ್ನ, ಟಿ.ಬಿ. ಗಣೇಶ, ತೋಟಂಬೈಲು ಪ್ರಸನ್ನ, ಟಿ.ಸಿ. ಅಶೋಕ್, ಧರ್ಮಲಿಂಗ, ಅಜಿತ್‍ಕುಮಾರ್, ವಿ.ಕೆ. ಸುನಿಲ್‍ಕುಮಾರ್, ಹರಿಣಿ ಸುದರ್ಮ ಅವರುಗಳು ಆಯ್ಕೆಯಾದರು. ನೆಲ್ಲಿಹುದಿಕೇರಿಯ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ನಂಜುಂಡಸ್ವಾಮಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಅಚ್ಚಯ್ಯ ಅವರು ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಸಹಕಾರ ಸಂಘವನ್ನು ಯಾವದೇ ತಾರತಮ್ಯವಿಲ್ಲದೆ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವದೆಂದು ತಿಳಿಸಿದರು.