ಚೆಟ್ಟಳ್ಳಿ, ಅ. 27: ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಷ್ಟೇ ಉಳಿದಿದೆ. ಈಗಾಗಲೇ ರಾಜಕೀಯ ಲೆಕ್ಕಾಚಾರಗಳು ಎಲ್ಲಾ ವಲಯಗಳಲ್ಲಿ ಶುರುವಾಗಿದೆ. ತಡೆಯಿಲ್ಲದೆ ಓಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ನಿಲ್ಲಿಸುವದು ಯಾವದೇ ಪಕ್ಷಕ್ಕಾದರೂ ಏಕಾಂಗಿಯಾಗಿ ಅಸಾಧ್ಯ ಎಂಬ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ಮೊದಲು ಬಿಜೆಪಿ ನೇತೃತ್ವದ ಎನ್‍ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎಗಳ ಮಧ್ಯೆ ನೇರ ಹಣಾಹಣಿ ಇರುತ್ತಿದ್ದು, ಪ್ರಾದೇಶಿಕ ಪಕ್ಷಗಳು ಒಂದಾಗಿ ತೃತೀಯ ರಂಗದ ರಚನೆ ಮಾಡಿಕೊಂಡು ಕಣಕ್ಕಿಳಿಯುತ್ತಿದ್ದವು. ಆದರೆ ಈ ಬಾರಿ ಕಾಂಗ್ರೆಸ್ ಕೂಡ ತೃತೀಯ ರಂಗದ ಭಾಗವಾಗುವ ಸ್ಪಷ್ಟ ಸೂಚನೆಗಳನ್ನು ನೀಡಿದೆ.

ಈ ಎಲ್ಲಾ ಲೆಕ್ಕಾಚಾರಗಳಿಗೆ ವೇದಿಕೆ ಸೃಷ್ಟಿಯಾಗಿದ್ದು ಕರ್ನಾಟಕ ವಿಧಾನಸಭಾ ಚುನಾವಣೆಯಿಂದ. 104 ಸ್ಥಾನಗಳನ್ನು ಪಡೆದರೂ, ಕೊನೆಯ ಕ್ಷಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರ ವಂಚಿತವಾಯಿತು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಸಂಭ್ರಮದಲ್ಲಿರುವ ಜೆಡಿಎಸ್ ಕಾಂಗ್ರೆಸ್ ಈ ಮೈತ್ರಿಯನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸುವ ಕುರಿತು ಯಶಸ್ವಿಯಾಗಿ ಮಾತುಕತೆ ನಡೆಸಿವೆ. ಹಾಗೊಂದು ವೇಳೆ ಚುನಾವಣಾ ಮೈತ್ರಿ ನಡೆದರೆ, ಅದರ ನೇರ ಪರಿಣಾಮ ಆಡಳಿತಾರೂಢ ಬಿಜೆಪಿ ಮೇಲೆ ಆಗುವದು ಸುಸ್ಪಷ್ಟ.

2014ರ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 17ನ್ನು ಮೋದಿ ಅಲೆಯಲ್ಲಿ ಗೆದ್ದು ಬೀಗಿದ್ದ ಬಿಜೆಪಿ ಅದೇ ಪ್ರದರ್ಶನವನ್ನು ಮರಳಿ ತೋರುವುದು ಕಷ್ಟಸಾಧ್ಯ.

ಈಗಾಗಲೇ ಜೆಡಿಎಸ್ ಹಾಗೂ ಬಹುಜನ ಸಮಾಜ ಪಾರ್ಟಿಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಕರ್ನಾಟಕದ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸಹ ಸೇರ್ಪಡೆಯಾಗಲಿದೆ. ಒಂದು ವೇಳೆ ಈ ಮೈತ್ರಿಕೂಟ 2014ರ ಚುನಾವಣೆಗಿಂತ ಶೇ. 10 ಹೆಚ್ಚು ಮತ ಗಳಿಸಿದರೂ ಬಿಜೆಪಿಯ ಸ್ಥಾನಗಳು ಕುಸಿಯುವ ಸಾಧ್ಯತೆಗಳಿವೆ.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನೇರ ಹೊಡೆತ

ಈ ಮೈತ್ರಿಕೂಟದ ನೇರ ಹೊಡೆತವನ್ನು ಬಿಜೆಪಿ ಎದುರಿಸುವದು ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ. ಕಳೆದ ಬಾರಿಯ ಚುನಾವಣಾ ಮತಗಳನ್ನು ಲೆಕ್ಕ ಹಾಕಿದರೆ, ಬಿಜೆಪಿಗಿಂತ ಜೆಡಿಎಸ್-ಕಾಂಗ್ರೆಸ್ ಶೇ. 10 ಹೆಚ್ಚು ಮತಗಳನ್ನು ಪಡೆದುಕೊಂಡಿದ್ದವು. ಈ ಬಾರಿ ಅವೆರಡೂ ಪಕ್ಷಗಳು ಒಂದಾಗಿ, ಮತ್ತದೇ ಮತಗಳನ್ನು ಪಡೆದರೂ ಬಿಜೆಪಿಯ ಓಟಕ್ಕೆ ತಡೆ ಉಂಟಾಗಲಿದೆ.

ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಅನೇಕ ಅಂಶಗಳು ವರದಾನವಾಗಿದ್ದವು. ಕಾಂಗ್ರೆಸ್‍ನಿಂದ ಕಣಕ್ಕಿಳಿದ ಹೆಚ್. ವಿಶ್ವನಾಥ್ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡರು ಮುನಿಸಿಕೊಂಡಿದ್ದರು. ವಿಶ್ವನಾಥ್ ಸೋಲಲೇ ಬೇಕೆಂದು ಪಣತೊಟ್ಟಿದ್ದ ಗೌಡರು , ಜೆ.ಡಿ.ಎಸ್.ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದುದು ಕಮಲ ಪಾಳಯದ ಅಭ್ಯರ್ಥಿಯಾದ ಪ್ರತಾಪ್ ಸಿಂಹಗೆ ಪರೋಕ್ಷವಾಗಿ ನೆರವಾಗಿತ್ತು.

ವಿಶ್ವನಾಥ್ ವಿರುದ್ಧ ಮುನಿಸಿಕೊಂಡಿದ್ದ ಒಕ್ಕಲಿಗರೂ ಪ್ರತಾಪ್ ಪರವಾಗಿ ಮತ ಚಲಾಯಿಸಿದರು. ವಿಶ್ವನಾಥ್ ಸೋಲಿಗೆ ಕೈ ಪಡೆಯೇ ಪಿತೂರಿ ನಡೆಸಿತ್ತು. ಹೀಗಾಗಿ ಪ್ರತಾಪ್ ಗೆಲವಿನ ಹಾದಿ ಸುಗಮವಾಗಿತ್ತು.

ಆದರೆ ಈ ಬಾರಿ ಪ್ರತಾಪ್ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಬಿಜೆಪಿಯೇತರ ಜಾತ್ಯತೀತ ಮತಗಳು ಒಗ್ಗೂಡಲಿದೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಎರಡೂ ಪಕ್ಷಗಳ ಮತಗಳು ಸೇರಿದರೆ ಅಷ್ಟು ಮತಗಳನ್ನು ಬಿಜೆಪಿ ಪಡೆಯಲು ಸಾಧ್ಯವಿದೆಯೇ? ಹೀಗಾಗಿ ಬಿಜೆಪಿ ಮತ ಸೆಳೆಯಲು ಹತ್ತು ಪಟ್ಟು ಹೆಚ್ಚಿನ ಶ್ರಮ ಪಡಬೇಕಾಗಿದೆ.

ಕಳೆದ ಚುನಾವಣೆಯಲ್ಲಿ ಗೆಲವಿನ ದಡ ಸೇರಲು ನೆರವಾದ ಮೋದಿ ಅಲೆ ಈ ಬಾರಿ ಅಷ್ಟೊಂದು ಪ್ರಭಾವ ಬೀರದಿದ್ದಲ್ಲಿ ಪ್ರತಾಪ್ ಮತಯಾಚಿಸಲು ಹೆಣಗಬೇಕಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆ ಕೊಡಗು-ಮೈಸೂರು ಕ್ಷೇತ್ರವು ಅತ್ಯಂತ ಕುತೂಹಲ ರೋಮಾಂಚನಕಾರಿಯಾಗಲಿದೆ. ಯಾರು, ಯಾರ ಬೆಂಬಲಕ್ಕೆ ನಿಲ್ಲುತ್ತಾರೆ, ಯಾರು ಯಾರ ಸೋಲಿಗೆ ಕಾರಣರಾಗುತ್ತಾರೆ ಎಂಬದಕ್ಕೆ ಚುನಾವಣೆಯೇ ತಕ್ಕ ಉತ್ತರ ನೀಡಬೇಕಿದೆ.

ಕೈ-ತೆನೆ ದೋಸ್ತಿ ಅಭ್ಯರ್ಥಿಯಾಗಿ ಮಾಜಿ ಸಂಸದ

ಸಿ.ಹೆಚ್. ವಿಜಯಶಂಕರ್ ಕಣಕ್ಕೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಸತ್ ಚುನಾವಣೆಯಲ್ಲೂ ಮುಂದುವರಿದರೆ ಮೈಸೂರು-ಕೊಡಗು ಸಂಸತ್ ಕ್ಷೇತ್ರವನ್ನು ತಮಗೇ ಬಿಡಬೇಕೆಂದು ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹಕ್ಕು ಮಂಡಿಸುತ್ತಿವೆ. ಚುನಾವಣೆಗೆ 7 ತಿಂಗಳಿರುವಾಗಲೇ ಬೇಡಿಕೆಯನ್ನು ಮುಂದಿಡುತ್ತಿದೆ.

ಈ ಕ್ಷೇತ್ರವನ್ನು ಈ ಮೊದಲು ಎರಡು ಬಾರಿ ಬಿಜೆಪಿಯಿಂದ ಪ್ರತಿನಿಧಿಸಿದ್ದ ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದು, ಈ ಕ್ಷೇತ್ರದಿಂದ ಟಿಕೆಟ್ ಪಡೆಯುವ ಭರವಸೆಯನ್ನು ಕಾಂಗ್ರೆಸ್ ನಾಯಕರಿಂದ ಪಡೆದಿದ್ದಾರೆ. ಕಳೆದ ಬಾರಿ ಪ್ರತಾಪ್ ಸಿಂಹಗೆ ಟಿಕೆಟ್ ನೀಡುವ ಬಿಜೆಪಿಯ ಕೊನೆ ಕ್ಷಣದ ನಿರ್ಧಾರದಿಂದ ಬಲಿಪಶುವಾಗಿದ್ದು ಮತ್ತು ಪಕ್ಷದ ನಿರ್ಧಾರದಂತೆ ಹಾಸನಕ್ಕೆ ಹೋಗಿ, ದೇವೇಗೌಡರ ವಿರುದ್ಧ ಸ್ಪರ್ಧಿಸಿ ಭಾರೀ ಅಂತರದಲ್ಲಿ ಸೋತಿದ್ದರ ಅನುಕಂಪ ಅವರ ಪಾಲಿಗಿದೆ. ವಿಜಯಶಂಕರ್ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈಪಡೆ ಸೇರಿ, ಕ್ಷೇತ್ರವನ್ನು ಸುತ್ತುತ್ತಿದ್ದಾರೆ.

ಒಂದು ವೇಳೆ ಕೊಡಗು-ಮೈಸೂರು ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪಾಳಯದಿಂದ ಪ್ರಭಾವಿ ಕುರುಬ ನಾಯಕರಾದ, ಕ್ಷೇತ್ರದಲ್ಲಿ ಮೊದಲ ಬಾರಿ ಕಮಲದ ಬಾವುಟ ಹಾರಿಸಿದ ವಿಜಯಶಂಕರ್ ಸ್ಪರ್ಧೆ ಮಾಡಿದರೆ ಹಾಲಿ ಸಂಸದ ಪ್ರತಾಪ್ ಸಿಂಹ ನೇರ ಪೈಪೋಟಿ ಎದುರಿಸಲಿದ್ದಾರೆಂದು ಅಂದಾಜಿಸಲಾಗಿದೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಮೈಸೂರು ನಗರ-ಜಿಲ್ಲೆಯ ಕೃಷ್ಣರಾಜ, ನರಸಿಂಹರಾಜ, ಚಾಮರಾಜ, ಹುಣಸೂರು, ಚಾಮುಂಡೇಶ್ವರಿ, ಪಿರಿಯಾಪಟ್ಟಣ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಕ್ಷೇತ್ರಗಳ ಪೈಕಿ ನಾಲ್ಕರಲ್ಲೀಗ (ಕೃಷ್ಣರಾಜ, ಚಾಮರಾಜ, ಮಡಿಕೇರಿ, ವೀರಾಜಪೇಟೆ) ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಮೂರು ಕ್ಷೇತ್ರದಲ್ಲಿ (ಹುಣಸೂರು, ಚಾಮುಂಡೇಶ್ವರಿ ಮತ್ತು ಪಿರಿಯಾಪಟ್ಟಣ) ಜೆಡಿಎಸ್ ಗೆದ್ದಿದೆ. ಕಾಂಗ್ರೆಸ್‍ಗೆ ನರಸಿಂಹರಾಜ ಕ್ಷೇತ್ರ ಮಾತ್ರ. ಕಾಂಗ್ರೆಸ್ ಪಕ್ಷದ ಈ ಪರಿಯ ಹಿನ್ನಡೆಯನ್ನಾಧರಿಸಿಯೇ ಸ್ಥಳೀಯ ‘ದಳಪತಿ’ಗಳು ಮೈಸೂರು ಕ್ಷೇತ್ರ ಪಕ್ಷಕ್ಕೇ ಸಿಗಬೇಕೆಂದು ಹಕ್ಕು ಸ್ಥಾಪಿಸುತ್ತಿದ್ದಾರೆ.

ಇತಿಹಾಸದಲ್ಲಿ ಜನತಾ ಪರಿವಾರ ಕೊಡಗು-ಮೈಸೂರು ಕ್ಷೇತ್ರದಲ್ಲಿ ಗೆದ್ದಿಲ್ಲ

ಆದರೆ, ಈ ಕ್ಷೇತ್ರದ ಇತಿಹಾಸದಲ್ಲಿ ಯಾವತ್ತೂ ಜನತಾ ಪರಿವಾರ ಗೆದ್ದದ್ದಿಲ್ಲ. 1996ರಲ್ಲಿ ಕಾಂಗ್ರೆಸ್‍ನ ಶ್ರೀಕಂಠದತ್ತ ಒಡೆಯರ್ ಎದುರು ಜೆಡಿಎಸ್ ಅಭ್ಯರ್ಥಿಯಾಗಿದ್ದ ಜಿ.ಟಿ. ದೇವೇಗೌಡ ಮತ್ತು 2004ರಲ್ಲಿ ಬಿಜೆಪಿಯ ವಿಜಯ ಶಂಕರ್‍ಗೆ ಎದುರಾಳಿಯಾಗಿದ್ದ ಎ.ಎಸ್. ಗುರುಸ್ವಾಮಿ 2ನೇ ಸ್ಥಾನ ಪಡೆದದ್ದಷ್ಟೆ ಇಲ್ಲಿ ಪಕ್ಷದ ಈವರೆಗಿನ ಗರಿಷ್ಠ ಸಾಧನೆ. 1998, 2004 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದರ ಹೊರತು ಉಳಿದೆಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವೇ ಪ್ರಾಬಲ್ಯ ಸ್ಥಾಪಿಸಿತ್ತು.

- ಕೆ.ಎಂ. ಇಸ್ಮಾಯಿಲ್, ಕಂಡಕರೆ