ಮಡಿಕೇರಿ, ಅ. 27: ಗ್ರೀನ್ ಸಿಟಿ ಫೋರಂ ನೂತನ ಅಧ್ಯಕ್ಷರಾಗಿ ಕುಕ್ಕೇರ ಜಯ ಚಿಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ರಾತ್ರಿ ಕಾಫಿಕಾಡ್ ಎಸ್ಟೇಟ್ನಲ್ಲಿ ನಡೆದ ಫೋರಂ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನ ಪ್ರಧಾನ ಕಾರ್ಯದರ್ಶಿಯಾಗಿ ಪೂಳಕಂಡ ರಾಜೇಶ್, ಖಜಾಂಚಿಯಾಗಿ ಕನ್ನಂಡ ಕವಿತಾ ಬೊಳ್ಳಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಚೈಯ್ಯಂಡ ಸತ್ಯ ಗಣಪತಿ, ಅಂಬೆಕಲ್ ನವೀನ್ ಕುಶಾಲಪ್ಪ, ಮೋಂತಿ ಗಣೇಶ್, ಪಿ. ಕೃಷ್ಣಮೂರ್ತಿ, ಸವಿತಾ ಭಟ್, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿರಿಯಮಾಡ ರತನ್ ತಮ್ಮಯ್ಯ, ಮಾದೇಟಿರ ತಿಮ್ಮಯ್ಯ ಕಾರ್ಯನಿರ್ವಹಿಸಲಿದ್ದಾರೆ. ನೂತನ ಆಡಳಿತ ಮಂಡಳಿಯ ಆಡಳಿತಾವಧಿ ಒಂದು ವರ್ಷದಾಗಿರುತ್ತದೆ.
ಚೈಯ್ಯಂಡ ಸತ್ಯ ಗಣಪತಿ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಗ್ರೀನ್ ಸಿಟಿ ಫೋರಂ ಮಡಿಕೇರಿಯಲ್ಲಿ ‘ಲೆಟ್ ಅಸ್ ಕ್ಲೀನ್ ಇಟ್’ ಅಭಿಯಾನ ಹಮ್ಮಿಕೊಳ್ಳುವದರ ಮೂಲಕ ಗಮನ ಸೆಳೆದಿತ್ತು. ಅಂಬೆಕಲ್ ನವೀನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿನ ಆಡಳಿತ ಮಂಡಳಿ ಸತತ 12 ದಿನ ನಡೆಸಿದ ಮಡಿಕೇರಿ ಕೋಟೆ ಸ್ವಚ್ಛತಾ ಅಭಿಯಾನದ ಮೂಲಕ ಗಮನ ಸೆಳೆದಿದೆ. ಅದೇ ರೀತಿ ತಮ್ಮ ಅವಧಿಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದೆಂದು ಕುಕ್ಕೇರ ಜಯ ಚಿಣ್ಣಪ್ಪ ಘೋಷಿಸಿದರು.
ತಮ್ಮ ಅವಧಿಯಲ್ಲಿ ಸರ್ವರ ಬೆಂಬಲದಿಂದ ಸಮಾಜದ ಗಮನ ಸೆಳೆಯುವ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ. ನೂತನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವದೆಂದು ನಿರ್ಗಮಿತ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಹೇಳಿದರು. ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿರುವ ಜಯ ಚಿಣ್ಣಪ್ಪ ಬೆಂಗಳೂರಿನಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದವರು. ತದನಂತರ ಮಡಿಕೇರಿಗೆ ಬಂದು ನೆಲೆಸಿದ್ದು, ಸಮಾಜಮುಖಿ ಕೆಲಸದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹೇಳಿದರು.
ಪ್ರಧಾನ ಕಾರ್ಯದರ್ಶಿಯಾಗಿ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಫೋರಂ ಹಿತದೃಷ್ಟಿಯಿಂದ ಇಂತಹ ಕ್ರಮ ತೆಗೆದುಕೊಂಡಿದ್ದು, ವೈಯಕ್ತಿಕ ವಿಷಯ ಏನಿಲ್ಲ ಎಂದು ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಪಿ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು. ತಾನು 20 ವರ್ಷದಿಂದ ಸ್ವಚ್ಛತೆ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೂತನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡಲಾಗುವದೆಂದು ಮೋಂತಿ ಗಣೇಶ್ ಹೇಳಿದರು.