ಕುಶಾಲನಗರ, ಅ. 27: ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಕ್ರಿಯೆಗಳು ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲಗುತ್ತಿರುವ ಪರಿಸ್ಥಿತಿ ಸೃಷ್ಠಿಯಾಗಿರುವದು ಅತ್ಯಂತ ವಿಷಾದನೀಯ ಎಂದು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಸಭಾಂಗಣದಲ್ಲಿ “ಪ್ರಜಾ ಸತ್ಯ” ದಿನಪತ್ರಿಕೆ ಆಶ್ರಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಮತ್ತು ಸ್ಥಳೀಯ ನಾಗರಿಕರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭ್ಯರ್ಥಿಗಳು ನೀಡಿದ ಭರವಸೆಯನ್ನು ಚುನಾವಣೆ ನಂತರ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ, ರಾಜಕಾರಣಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಕೇವಲ ಗೆಲವಿನ ಗುರಿ ಹೊಂದದೆ ಸಾಮಾಜಿಕ ಕಳಕಳಿ ಉಳ್ಳವರಾಗಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭ ಮತದಾರರು ಆಮಿಷಕ್ಕೆ ಒಳಗಾಗದೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾರಣಕರ್ತರಾಗಬೇಕು ಎಂದರು. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಮತದಾರರು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಶಾಲನಗರ ಪಟ್ಟಣ ಪಂಚಾಯಿತಿ ವಿವಿಧ ವಾರ್ಡ್‍ಗಳ ಅಭ್ಯರ್ಥಿಗಳಾದ ಕೆ.ಎಸ್. ಮಹೇಶ್, ಮಹದೇವ್, ಹೆಚ್.ಎಂ. ಹೇಮಲತಾ. ಜಯಲಕ್ಷ್ಮಮ್ಮ, ಪದ್ಮಾವತಿ, ಅಮೃತ್‍ರಾಜ್, ಶರತ್, ನವೀನ್ ಮತ್ತಿತರರು ತಾವುಗಳು ಕ್ಷೇತ್ರದ ಅಭಿವೃದ್ಧಿಯೊಂದಿಗೆ ಕುಶಾಲನಗರ ಪಟ್ಟಣದ ಸರ್ವಾಂಗೀಣ ಏಳಿಗೆಗೆ ಶ್ರಮಿಸುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿದಿರುವದಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರಘು ಹೆಬ್ಬಾಲೆ, ಸುನಿಲ್ ಪೊನ್ನೇಟಿ ಉಪಸ್ಥಿತರಿದ್ದರು.

ಪಂಚಾಯಿತಿಯ ಮಾಜಿ ಸದಸ್ಯ ನಂಜುಂಡಸ್ವಾಮಿ, ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕೊಡಗು ಘಟಕದ ಅಧ್ಯಕ್ಷ ಕೆ.ಆರ್. ಜಗದೀಶ್, ಪ್ರಮುಖ ಕೆ.ಎಸ್. ನಾಗೇಶ್ ಚರ್ಚೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಪ್ರಜಾಸತ್ಯ ದಿನಪತ್ರಿಕೆಯ ಬಿ.ಸಿ. ದಿನೇಶ್, ವಿನೋದ್, ಕೆ.ಟಿ. ಶ್ರೀನಿವಾಸ್, ಗಣೇಶ್ ಕೂಡಿಗೆ ನಡೆಸಿಕೊಟ್ಟರು.