ಮಡಿಕೇರಿ, ಅ. 27 : ವೀರಾಜಪೇಟೆ ತಾಲೂಕಿನ ತಟ್ಟೆಕೆರೆ ಗಿರಿಜನ ಹಾಡಿಯ ಕುಟುಂಬದವರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ, ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹಾಡಿಯ ಜನರ ಉಪಸ್ಥಿತಿಯಲ್ಲಿ ಸಭೆ ಆಹ್ವಾನಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜದವರಿಗೆ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ದೊರೆಯ ಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.
ಅರಣ್ಯ ಹಕ್ಕು ಕಾಯ್ದೆಯಡಿ ನೀಡಿದ ಜಾಗದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಯಾರು ಸಹ ತೊಂದರೆ ನೀಡಬಾರದು.
ಅರಣ್ಯ ಹಕ್ಕು ಕಾಯ್ದೆಯಡಿ ಗಿರಿಜನರಿಗೆ ನೀಡಿದ ನಿವೇಶನಕ್ಕೆ ಆರ್‍ಟಿಸಿ ನಮೂದಾಗಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ತಟ್ಟೆಕೆರೆ ಹಾಡಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ತಟ್ಟಕೆರೆ ಹಾಡಿಯಲ್ಲಿನ 31 ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡಲಾಗಿದೆ. ಉಳಿದ 26 ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಬೇಕಿದೆ ಎಂದು ಮಾಹಿತಿ ನೀಡಿದರು.
ತಟ್ಟೆಕೆರೆ ಹಾಡಿಗೆ ಸಂಬಂಧಿಸಿ ದಂತೆ ವಿಷಯ ಪ್ರಸ್ತಾಪಿಸಿದ ಸಮಿತಿ ಸದಸ್ಯ ಪಳನಿ ಪ್ರಕಾಶ್ ತಟ್ಟೆಕೆರೆಯು ಶೀತ ಪ್ರದೇಶದಿಂದ ಕೂಡಿದ್ದು, ವಾಸ ಮಾಡಲು ಯೋಗ್ಯವಿಲ್ಲ, ಆದ್ದರಿಂದ ತಟ್ಟಕೆರೆ ಬಳಿ ಜಾಗ ನೀಡುವಂತಾಗ ಬೇಕೆಂದು ಮನವಿ ಮಾಡಿದರು.
ಸದ್ಯ ತಟ್ಟೆಕೆರೆಯ ಗಿರಿಜನ ಕುಟುಂಬಗಳಿಗೆ ಈಗ ಗುರುತಿಸಲಾಗಿರುವ ಜಾಗ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದ್ದರಿಂದ ತಟ್ಟೆಕೆರೆಯ ಬಳಿ ವಸತಿ ಕಲ್ಪಿಸಬೇಕು. ಹಾಗೆಯೇ ಲೈನ್ ಮನೆಗಳಲ್ಲಿರುವವರಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಪಳನಿ ಪ್ರಕಾಶ್ ಸಲಹೆಯಿತ್ತರು.
ಮತ್ತೊಬ್ಬ ಸದಸ್ಯ ಜೆ.ಪಿ. ರಾಜು ತಟ್ಟೆಕೆರೆ ಗಿರಿಜನರ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಭೆಯಲ್ಲಿ ಗಮನ ಸೆಳೆಯುತ್ತ ಬರಲಾಗಿದೆ. ಆದರೆ ಇದುವರೆಗೆ ಯಾವದೇ ಕಾರ್ಯಗಳು ಕೈಗೊಂಡಿಲ್ಲ ಎಂದರು.
ಸಮಿತಿ ಸದಸ್ಯ ಮುತ್ತಪ್ಪ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಹಲವು ಪರಿಶಿಷ್ಟ ಕುಟುಂಬಗಳು ಮನೆ ಕಳೆದು ಕೊಂಡಿದ್ದು, ಪುನರ್ವಸತಿ ಕಲ್ಪಿಸಬೇಕಿದೆ ಎಂದು ಕೋರಿದರು.
ನಗರಸಭೆಯ ವ್ಯವಸ್ಥಾಪಕಿ ಸುಜಾತಾ ಪೌರಕಾರ್ಮಿಕರಿಗೆ ಮನೆ ಒದಗಿಸುವ ಸಂಬಂಧ ಗೃಹಭಾಗ್ಯ ಯೋಜನೆಯಡಿ ನಗರದ ಸುದರ್ಶನ ಅತಿಥಿ ಗೃಹದ ಬಳಿ ಮನೆ ನಿರ್ಮಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಸಮಿತಿ ಸದಸ್ಯೆ ಜಾಯ್ಸ್ ಮ್ಯಾನೆಜರ್ಸ್ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಸ್ವ-ಉದ್ಯೋಗ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆ ಕರೆಯಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಮಿತಿ ಸದಸ್ಯರು ಮನವಿ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಸಭೆ ಕರೆಯುವ ಭರವಸೆಯಿತ್ತರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್, ಡಿ.ವೈ.ಎಸ್.ಪಿ ಮುರುಳೀಧರ, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಆಹಾರ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕÀ ಮಲ್ಲೇಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ತಾ.ಪಂ ಇಒ ಲಕ್ಷ್ಮಿ, ವೀರಾಜಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ಚಂದ್ರಶೇಖರ, ಕಾರ್ಮಿಕ ಇಲಾಖೆಯ ಅಧಿಕಾರಿ ಮಹದೇವ ಸ್ವಾಮಿ ಇತರರು ಇದ್ದರು.