ಸೋಮವಾರಪೇಟೆ, ಅ. 27: ಭೂಕುಸಿತಕ್ಕೆ ಒಳಗಾಗಿ ಕಳೆದ ಮೂರು ತಿಂಗಳಿನಿಂದ ನಾಲ್ಕು ಚಕ್ರಗಳ ವಾಹನ ಸಂಚಾರ ಸ್ಥಗಿತಗೊಂಡಿರುವ ಹಾನಗಲ್ಲು-ತಾಕೇರಿ-ಬಿಳಿಗೇರಿ-ಮಾದಾಪುರ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿರುಸಿನ ಕಾಮಗಾರಿ ನಡೆಯುತ್ತಿದ್ದು, ಮುಂದಿನ 15 ದಿನಗಳ ಒಳಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆ ದೊರೆತಿದೆ.

ಹಾನಗಲ್ಲು ಗಣಪತಿ ದೇವಾಲಯದಿಂದ ದುದ್ದುಗಲ್ಲು ರಸ್ತೆಯ 2 ಕಡೆಗಳಲ್ಲಿ ಭೂಕುಸಿತ ಸಂಭವಿಸಿ ನಾಲ್ಕು ಚಕ್ರಗಳ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಳೆದ ಆಗಸ್ಟ್ 18ರಂದು ಈ ರಸ್ತೆಯಲ್ಲಿರುವ ಪಂಪ್‍ಹೌಸ್ ಬಳಿ ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿದ್ದು, ಎರಡು ತಿಂಗಳಿನಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ.

ಹಾನಗಲ್ಲು ಮಾರ್ಗವಾಗಿ ದುದ್ದುಗಲ್ಲು, ಕಿರಗಂದೂರು, ತಾಕೇರಿ, ಬಿಳಿಗೇರಿ, ಮಕ್ಕಳಗುಡಿಬೆಟ್ಟ, ಐಗೂರು, ಕುಂಬೂರು, ಗರ್ವಾಲೆ ಸೇರಿದಂತೆ ಇತರ ಗ್ರಾಮಗಳಿಗೂ ಸಂಪರ್ಕ ಕಲ್ಪಿಸುತ್ತಿದ್ದ ಈ ರಸ್ತೆ ಕುಸಿತಗೊಂಡಿರುವದಿಂದ ಸಾರ್ವಜನಿಕರು ಬದಲಿ ರಸ್ತೆಯನ್ನು ಅವಲಂಬಿಸಿದ್ದಾರೆ.

ದುದ್ದುಗಲ್ಲು ಮುಖ್ಯರಸ್ತೆಯ ಬದಿಯಲ್ಲಿ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ಕುಡಿಯುವ ನೀರಿನ ಮೋಟಾರ್ ಪಂಪ್‍ಹೌಸ್ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿದಿದ್ದು, ರಸ್ತೆ ಕೊಚ್ಚಿಕೊಂಡು ಪ್ರಪಾತ ಸೇರಿದೆ. ಸುಮಾರು 1.75 ಲಕ್ಷ ಚೀಲಗಳಲ್ಲಿ ಎಂ.ಸ್ಯಾಂಡ್ ತುಂಬಿಸಿ ಪ್ರಪಾತದಲ್ಲಿ ತಡೆಗೋಡೆ ನಿರ್ಮಿಸಿದ್ದು, 300 ಅಡಿ ಸಾಮಥ್ರ್ಯದ 160 ಲೋಡ್‍ಗಳಷ್ಟು ಎಂ ಸ್ಯಾಂಡ್‍ನ್ನು ಕಾಮಗಾರಿಗೆ ಬಳಸಲಾಗಿದೆ.

ತಡೆಗೋಡೆ ನಿರ್ಮಿಸುವ ಕಾಮಗಾರಿ ಮುಕ್ತಾಯಗೊಂಡಿದ್ದು, ಇನ್ನು ಚರಂಡಿ ನಿರ್ಮಿಸುವ ಕೆಲಸ ಬಾಕಿ ಇದೆ. ಇದರೊಂದಿಗೆ ರಸ್ತೆಗೆ ವೆಟ್‍ಮಿಕ್ಸ್ ಹಾಕಿ ನೀರು ಹಾಯಿಸುವ ಮೂಲಕ ರಸ್ತೆಯನ್ನು ಗಟ್ಟಿಗೊಳಿಸಬೇಕಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು ಎಂದು ಜಿ.ಪಂ. ಅಭಿಯಂತರ ವಿಜಯಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.

ದುದ್ದುಗಲ್ಲು ಹೊಳೆ ಸಮೀಪ ರಸ್ತೆ ಕುಸಿದಿರುವ ಸ್ಥಳದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದ್ದು, ಪಕ್ಕದಲ್ಲಿರುವ ಬರೆಯನ್ನು ಕೊರೆದು ನೂತನ ರಸ್ತೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ.

- ವಿಜಯ್ ಹಾನಗಲ್