ಚೆಟ್ಟಳ್ಳಿ, ಅ. 27: ನೋಕಿಯಾದ ಬೆಂಗಳೂರು ಘಟಕದ ವತಿಯಿಂದ ಸಂಗ್ರಹಿಸಲಾದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ನೋಕಿಯಾದ ಇಂಜಿನಿಯರು ಗಳಾದ ಶಿವ ಮತ್ತು ಹೇಮಂತ್ ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಪುತ್ತರಿರ ಪಪ್ಪು ತಿಮ್ಮಯ್ಯ ಮತ್ತು ಕೋದಂಡ ಸೋಮಣ್ಣ ಮುಖಾಂತರ ಹೊಲಿಗೆ ಯಂತ್ರಗಳು ಮತ್ತು ನಗದು ರೂಪದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಬಾಳೆಲೆಯ ದಾನಿಗಳಾದ ಮಾಪಂಗಡ ಸಜನ್ ದೇವಯ್ಯ ಮತ್ತು ಚಾಮೇರಾ ಸಂತು ಜಗನ್ ಉಪಸ್ಥಿತರಿದ್ದರು. ಫಲಾನುಭವಿಗಳಾದ ಮಂಗಳಾದೇವಿ ನಗರದ ನಿವಾಸಿ ಈಗಾಗಲೇ ಎಲ್ಲವನ್ನು ಕಳೆದುಕೊಂಡ ಇಡಾ ಎಂಬ ವಿಧವೆ ಮಹಿಳೆಯೊಬ್ಬಳು ತನ್ನ ಮಗಳನ್ನು ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದಿಸುತ್ತಿದ್ದು, ತಾನು ಕೂಲಿ ಕೆಲಸ ಮಾಡುತ್ತಾ ತನ್ನ ಮಗಳ ಕಾಲೇಜಿನ ಶುಲ್ಕವನ್ನು ಪಾವತಿಸಲಾಗದೆ ಪರದಾಡುತ್ತಿದ್ದರು. ಈ ಅಬಲೆಯ ಕುಟುಂಬಕ್ಕೂ ನೆರವಿನೊಂದಿಗೆ ಮಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಕಲ್ಪಿಸಲಾಗಿದೆ.