*ಗೋಣಿಕೊಪ್ಪಲು, ಅ. 27: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ದಿಯಾ ಭೀಮಯ್ಯ ಬ್ಯಾಡ್ಮಿಂಟನ್‍ನಲ್ಲಿ ಉತ್ತಮ ಪ್ರತಿಭೆ ತೋರುತ್ತಿದ್ದಾರೆ. ಎಳೆಯ ವಯಸ್ಸಿಗೆ ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ.

ಕೊಡಗು ಜಿಲ್ಲೆಯ ಬ್ಯಾಡ್ಮಿಂಟನ್ ಸಂಸ್ಥೆ ಕುಶಾಲನಗರದಲ್ಲಿ ಐಎನ್‍ಎಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಜಯಗಳಿಸಿ ಪ್ರಶಸ್ತಿ ಪಡೆದುಕೊಂಡಳು. ಮೈಸೂರಿನ ಕೊಡವ ಸಮಾಜದಲ್ಲಿ ನಡೆದ ಪಂದ್ಯಾವಳಿಯಲ್ಲಿಯೂ ಜಯಗಳಿಸಿ ಪ್ರಶಸ್ತಿ ಗಳಿಸಿದಳು.

ಪಿಎನ್‍ಬಿ ಮೆಟ್‍ಲೈಫ್ ಸೌತ್ ಜೋನ್ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ, ಎಗೋನ್ ಸಂಸ್ಥೆ ವತಿಯಿಂದ ನಡೆದ ಬಿ.ಕೆ. ರಾಜಗೋಪಾಲ್ ರಾಜ್ಯಮಟ್ಟದ 12 ವಯೋಮಿತಿಯ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದು ಭರವಸೆಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾಳೆ.

ಇತ್ತೀಚೆಗೆ ಬೆಂಗಳೂರಿನ ತಿರುಮನಹಳ್ಳಿ ಗುರುಕುಲದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಳು. ಈಕೆಯ ಪ್ರತಿಭೆಯನ್ನು ಗುರುತಿಸಿದ ಕೊಡಗು ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಪ್ಲಾಂಟರ್ಸ್ ಅಸೋಸಿಯೇಷನ್ ಸನ್ಮಾನಿಸಿ, ಗೌರವಿಸಿವೆ.

ಮಾಜಿ ಒಲಿಂಪಿಯನ್ ಅಶ್ವಿನಿ ಪೊನ್ನಪ್ಪ, ಕೊಡಗು ಬ್ಯಾಡ್ಮಿಂಟನ್ ಸಂಸ್ಥೆಯ ತರಬೇತುದಾರ ಅರುಣ್ ಪೆಮ್ಮಯ್ಯ ಈಕೆಯ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.

ವ್ಯಾಸಂಗದಲ್ಲಿಯೂ ಉತ್ತಮ ಪ್ರತಿಭೆ ಹೊಂದಿರುವ ದಿಯಾ ಬ್ಯಾಡ್ಮಿಂಟನ್‍ನಲ್ಲಿ ಉತ್ತಮ ಸಾಧನೆ ತೋರಬೇಕು ಎಂಬ ಛಲ ಹೊಂದಿದ್ದಾಳೆ. ದಿಯಾ ಗೋಣಿಕೊಪ್ಪಲಿನ ಕುಸುಮ್ ಹಾಗೂ ಭೀಮಯ್ಯ ಅವರ ಪುತ್ರಿ. - ಎನ್.ಎನ್. ದಿನೇಶ್