ಸುಂಟಿಕೊಪ್ಪ, ಅ. 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಒಕ್ಕೂಟದ ಸಭೆ ಸದಸ್ಯರಿಗೆ ಯೋಜನೆಯ ಸವಲತ್ತುಗಳ ಸದ್ಬಳಕೆ ಮತ್ತು ಮಕ್ಕಳ ದೌರ್ಜನ್ಯ ಕುರಿತು ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗದ್ದೆಹಳ್ಳದ ಅಕ್ಷಯ ಸ್ವಸಹಾಯ ಸಂಘದ ಪದಾಧಿಕಾರಿಗಳು ಆಯೋಜಿಸಿದ್ದ ಸಭೆಗೆ ಆಗಮಿಸಿದ್ದ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಯೋಜನೆಯ ವತಿಯಿಂದ ಮಹಿಳೆಯರ ವೈಯಕ್ತಿಕ ಅಭಿವೃದ್ಧಿಗಾಗಿ ಧನಸಹಾಯವನ್ನು ನೀಡಲಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆಗೊಳಿಸಿದ್ದರೆ ಮಾತ್ರ ವೈಯಕ್ತಿಕ ಬದಕು ಹಸನುಗೊಳ್ಳಲು ಸಾಧ್ಯ ಎಂದರು.
ಮಕ್ಕಳ ಸಹಾಯವಾಣಿ ಕೇಂದ್ರ ಸ್ವಯಂಸೇವಕರುಗಳಾದ ಕುಸುಮ ಮತ್ತು ಸುಪ್ರಿನ ಮಕ್ಕಳ ಹಕ್ಕು ಪೊಷಕರ ಪಾತ್ರ ಸಮಾಜದಲ್ಲಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ಮಾಹಿತಿ ನೀಡಿದರಲ್ಲದೆ. ಮಕ್ಕಳಿಗೆ ಶಿಕ್ಷಣ ನೀಡದೆ ದುಡಿಯಲು ಕಳುಹಿಸುವದರಿಂದ ಮಕ್ಕಳ ಪೋಷಕರು ಶಿಕ್ಷೆಗೆ ಒಳಗಾಗುವ ಸಾಧ್ಯತೆಯು ಇರುತ್ತದೆ ಎಂದರು.
ವೇದಿಕೆಯಲ್ಲಿ ಯೋಜನೆಯ ಮೇಲ್ವಿಚಾರಕಿ ಕಾಂತಿಕ ಮಣಿ, ಒಕ್ಕೂಟದ ಉಪಾಧ್ಯಕ್ಷೆ ದಿವ್ಯ, ಸೇವಾ ಪ್ರತಿನಿಧಿ ಜ್ಯೋತಿ ಲಕ್ಷ್ಮಿ, ಜಂಟಿ ಕಾರ್ಯದರ್ಶಿ ಸಬೀನಾ ಇದ್ದರು. ಪ್ರತಿನಿಧಿ ನಾಗರತ್ನ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.