ಮಡಿಕೇರಿ, ಅ. 28: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯೊಬ್ಬರು ಪಕ್ಷಪಾತ ಧೋರಣೆ ಅನುಸರಿಸುವದರೊಂದಿಗೆ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳು ತ್ತಿದ್ದಾರೆ ಎಂದು ಮಡಿಕೇರಿ ತಾಲೂಕು ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಆರೋಪಿಸಿದೆ. ಅಲ್ಲದೆ ಇವರ ವಿರುದ್ಧ ಕಾನೂನು ಹೋರಾಟ ನಡೆಸುವದರೊಂದಿಗೆ ಅವರ ವರ್ಗಾವಣೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾನೂನು ಸಲಹೆಗಾರ ಪವನ್ ಪೆಮ್ಮಯ್ಯ ಅವರು, ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವದ ರೊಂದಿಗೆ ಸಾರ್ವಜನಿಕರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಸೆ. 11ರಂದು ಮಡಿಕೇರಿಯ ಮೊಹಮದ್ ಆಲಿ ಎಂಬವರಿಗೆ ಸೇರಿದ ಲಾರಿಯೊಂದನ್ನು ಅಕ್ರಮ ಮರಳು ಸಾಗಾಟದ ಆರೋಪದಡಿ ವಶಪಡಿಸಿಕೊಂಡ ಹಿರಿಯ ಭೂ ವಿಜ್ಞಾನಿಯವರು ನಂತರ 20 ಸಾವಿರ ರೂ.ಗಳ ದಂಡ ಕಟ್ಟಿ ಲಾರಿಯನ್ನು ಬಿಡಿಸಿಕೊಂಡು ಹೋಗುವಂತೆ ಲಾರಿ ಮಾಲೀಕರಿಗೆ ಸೂಚಿಸಿದ್ದರು. ಆದರೆ ಲಾರಿ ಮಾಲೀಕರು 20 ಸಾವಿರ ರೂ.ಗಳ ಡಿಡಿಯನ್ನು ನೀಡಲು ಹೋದಾಗ, ಅದನ್ನು ಪಡೆದುಕೊಳ್ಳಲು ನಿರಾಕರಿಸಿದ್ದು, ಕಾರಣ ಕೇಳಿದಾಗ ಯಾವದೋ ವ್ಯಕ್ತಿ ಕರೆ ಮಾಡಿ ಲಾರಿ ಯನ್ನು ಬಿಡದಂತೆ ತಿಳಿಸಿರುವದರಿಂದ ಡಿಡಿ ಪಡೆಯಲಾಗುವದಿಲ್ಲ ಎಂದು ನಿರಾಕರಿಸಿ ಕಳುಹಿಸಿರುವದಾಗಿ ಆರೋಪಿಸಿದರು. ಅಕ್ರಮ ಸಾಗಾಟದ ಪ್ರಕರಣದಲ್ಲಿ ವಾಹನ ವಶಪಡಿಸಿ ಕೊಂಡಾಗ ದಂಡ ಕಟ್ಟಿಸಿಕೊಂಡು ವಾಹನವನ್ನು ಬಿಡುಗಡೆ ಮಾಡಲು ಅಧಿಕಾರಿಗೆ ಅವಕಾಶ ವಿದ್ದರೂ, ಯಾವದೋ ಒತ್ತಡಕ್ಕೆ ಮಣಿದು ಅಧಿಕಾರಿ ವಾಹನ ಬಿಡುಗಡೆ ಮಾಡಲು ನಿರಾಕರಿಸಿದ್ದಾರೆ. ಆ ನಂತರವೂ ವಾಹನ ಬಿಡುಗಡೆಗೆ ಯಾವದೇ ಕ್ರಮ ಕೈಗೊಂಡಿಲ್ಲ. ನ್ಯಾಯಾಲಯದ ಸರ್ಚ್ ವಾರಂಟ್ ಪಡೆಯುವದಾಗಿ ತಿಳಿಸಿದ ನಂತರ ಅಧಿಕಾರಿ ಸೆ. 18ರಂದು ನ್ಯಾಯಾಲ ಯಕ್ಕೆ ಪಿಸಿಆರ್ ಸಲ್ಲಿಸಿದ್ದರೂ, ಪಿಎಫ್ ವರದಿಯನ್ನು ನೀಡಿಲ್ಲವೆಂದು ಪೆಮ್ಮಯ್ಯ ದೂರಿದರು. ಇದಾದ ಬಳಿಕ ಸೆ. 23ರಂದು ಮಂಗಳೂರು ಮೂಲದ ವಾಹನವೊಂದನ್ನು ಅಕ್ರಮ ಸಾಗಾಟದ ಆರೋಪದಡಿ ವಶಕ್ಕೆ ಪಡೆದ ಇದೇ ಅಧಿಕಾರಿ ಕೇವಲ ಎರಡೇ ದಿನಗಳಲ್ಲಿ 20 ಸಾವಿರ ರೂ.ಗಳ ಡಿ.ಡಿ.ಯನ್ನು ಪಡೆದು ಬಿಡುಗಡೆ ಮಾಡಿದ್ದಾರೆ. ಕಾರಣ ಕೇಳಿದಾಗ ಶಾಸಕರೊಬ್ಬರು ಕರೆ ಮಾಡಿದ ಮೇರೆಗೆ ವಾಹನ ಬಿಡುಗಡೆ ಮಾಡಿರುವದಾಗಿ ಸಮಜಾಯಿಷಿಕೆ ನೀಡಿದ್ದಾರೆ. ಆದರೆ ಎಲ್ಲಾ ನಿಯಮಾವಳಿಗಳನ್ನು, ಷರತ್ತುಗಳನ್ನು ಪೂರ್ಣಗೊಳಿಸಿದ್ದರೂ, ಮೊಹಮದ್ ಆಲಿ ಅವರ ಲಾರಿಯನ್ನು ಬಿಡುಗಡೆ ಮಾಡದೆ ಅಧಿಕಾರಿ ಪಕ್ಷಪಾತ ಧೋರಣೆ ಅನುಸರಿಸಿದ್ದಲ್ಲದೆ, ನ್ಯಾಯಾಲಯಕ್ಕೆ ಪಿಎಫ್ ವರದಿ ಸಲ್ಲಿಸದೆ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಂದಿನ ಮೂರು ದಿನಗಳ ಒಳಗಾಗಿ ಲಾರಿಯನ್ನು ಬಿಡುಗಡೆ ಮಾಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಸಿ ಅಧಿಕಾರಿಯ ವರ್ಗಾವಣೆಗಾಗಿ ಒತ್ತಾಯಿಸಲಾಗುವದೆಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಶಿವ ಗೋಪನ್, ಕಾರ್ಯದರ್ಶಿ ಎಂ. ಶ್ರೀನಿವಾಸ್, ಖಜಾಂಚಿ ಗಣೇಶ್ ಹಾಗೂ ವಶಪಡಿಸಿಕೊಂಡ ಲಾರಿಯ ಮಾಲೀಕ ಮೊಹಮದ್ ಆಲಿ ಉಪಸ್ಥಿತರಿದ್ದರು.