ಶ್ರೀಮಂಗಲ, ಅ. 28: ಕಾವೇರಿ ಮಾತೆಯನ್ನು ತೀರ್ಥರೂಪಿಣಿಯಾಗಿ ಕಣ್ತುಂಬಿಸಿಕೊಳ್ಳುವ ದಿನದಿಂದ 10 ದಿನಗಳವರೆಗೆ ಕಾವೇರಮ್ಮೆಯನ್ನು ಸ್ತುತಿಸುತ್ತ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಪೂರ್ವಿಕರು ಆಚರಿಸುತ್ತಿದ್ದ ಚಂಗ್ರಾಂದಿ ಪತ್ತಲೋದಿ ಟಿ.ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಯಶಸ್ವಿಯಾಗಿ ನೆರವೇರಿತು.

ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ, ಕೊಡವ ತಕ್ಕ್ ಎಳ್ತ್‍ಕಾರಡ ಕೂಟ, ಟಿ.ಶೆಟ್ಟಿಗೇರಿ ಸಾರ್ವಜನಿಕ ಗೌರಿಗಣೇಶ ಸೇವಾ ಸಮಿತಿ ಹಾಗೂ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಎರಡನೇ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ನವರಾತ್ರಿ ಉತ್ಸವದಂತೆ ಜನೋತ್ಸವವಾಗಿ ನೆರವೇರಿತು. ತಾ. 18 ರಂದು ಕಾವೇರಿ ತೀರ್ಥ ಪೂಜೆ ಹಾಗೂ ಕಣಿ ಪೂಜೆ ಮಾಡಿ ಭಕ್ತಾಧಿಗಳಿಗೆ ತೀರ್ಥ ವಿತರಿಸಿದ ಮಾರನೇ ದಿನದಿಂದ 27ರ ಶನಿವಾರದ ವರೆಗೆ ಬೆಂಗಳೂರಿನ ಶಾಸ್ತ್ರೀಯ ನೃತ್ಯ ಕಲಾವಿದೆ ಕಿರಣ್, ಹುದಿಕೇರಿ ಮಾದೇವಡ ಯುವಕ ಸಂಘ, ಸಂಭ್ರಮ ಪೊಮ್ಮಕ್ಕಡ ಸಂಸ್ಥೆ, ಗೋಣಿಕೊಪ್ಪ ಜನನಿ ಪೊಮ್ಮಕ್ಕಡ ಕೂಟ, ಜೆ.ಸಿ ವಿದ್ಯಾಸಂಸ್ಥೆ, ಬೆಕ್ಕೆಸೊಡ್ಲೂರು ಮಂದತವ್ವ ಟ್ರಸ್ಟ್, ಸಾಯಿಶಂಕರ್ ವಿದ್ಯಾಲಯದ ಸಂತ್ರಸ್ತ ವಿದ್ಯಾರ್ಥಿಗಳು, ಗೋಣಿಕೊಪ್ಪ ಕಾವೇರಿ ಕಾಲೇಜು, ಶ್ರೀಮಂಗಲ ಜೂನಿಯರ್ ಕಾಲೇಜು ಹಾಗೂ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಗಳ ಕಲಾವಿದರಿಂದ ಸಂಜೆ 4.30 ಗಂಟೆಯಿಂದ 7.30 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ರೂಟ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಪ್ರಕೃತಿ ವಿಕೋಪದಲ್ಲಿ ಆದ ಕಷ್ಟನಷ್ಟ, ಪರಿಹಾರ ಕಾಣದೆ ಪರಿತಪಿಸುವ ಜನರ ಸಮಸೈ ಪರಿಹರಿಸಿ ಮರುಹೆಜ್ಜೆ ಹಾಕುವ ವಿಷಯಗಳನ್ನಾದರಿಸಿ ನಾಟಕ ಹಾಗೂ ನೃತ್ಯ ರೂಪಕದೊಂದಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಸಾರಿದರು. ಈ ಸಂದರ್ಭ ದಾನಿ ಕೈಬಿಲೀರ ಪಾರ್ವತಿ ಬೋಪಯ್ಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಹಾಗೂ ರೇವತಿ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ, ಕೊಡವ ಸಮಾಜ ಯಾವ ರೀತಿಯ ಕಾರ್ಯಕ್ರಮಗಳನ್ನು ಮಾಡಬಹು ದೆಂದು ಈ ಆಚರಣೆಯೊಂದಿಗೆ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ತೋರಿಸಿಕೊಟ್ಟಿದೆ. ಅಳಿವಿನ ಅಂಚಿನಲ್ಲಿರುವ ಕೊಡವ ಭಾಷೆಯನ್ನು ಉಳಿಸುವ ನಿಟ್ಟಿನ ಈ ಪ್ರಯತ್ನ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚೊಟ್ಟೆಯಾಂಡಮಾಡ ಚಂಗಪ್ಪ ಹಾಗೂ ಆಲೆಮಾಡ ಬೋಪಣ್ಣ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ನೀಡಲು ಧನ ಸಹಾಯ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಹಬ್ಬದ ಆಚರಣೆಯ ಅವಶ್ಯಕತೆಯ ಬಗ್ಗೆ ತಿಳಿಸುವದರೊಂದಿಗೆ ಧನ್ಯವಾದ ಅರ್ಪಿಸಿದರು.

ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಕ್ರೀಡೆ ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಕಟ್ಟೇರ ಈಶ್ವರ, ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್, ಸಂಭ್ರಮ ಪೊಮ್ಮಕ್ಕಡ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಸಾರ್ವಜನಿಕ ಗೌರಿಗಣೇಶ ಉತ್ಸವ ಸಮಿತಿಯ ನಿರ್ದೇಶಕ ಕರ್ನಂಡ ಚಲನ್ ಬೆಳ್ಳಿಯಪ್ಪ, ಜಿಲ್ಲಾಮಟ್ಟದ ಉತ್ತಮ ಕೃಷಿ ಮಹಿಳೆ ಪ್ರಶಸ್ತಿ ಪಡೆದ ಅಲ್ಲುಮಾಡ ಡೇಜಿ ತಿಮ್ಮಯ್ಯ ರೂಟ್ಸ್ ವಿದ್ಯಾಸಂಸ್ಥೆಯಲ್ಲಿ ಮುಖ್ಯ ಶಿಕ್ಷಕಿ ಕೆ. ಮಮತಾ ಉಪಸ್ಥಿತರಿದ್ದರು.

ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿ, ಕಟ್ಟೇರ ಈಶ್ವರ ಸ್ವಾಗತಿಸಿ, ಕೊಡವ ಸಮಾಜದ ಸಾಂಸ್ಕøತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ಚೊಟ್ಟೆಯಾಂಡಮಾಡ ವಿಶ್ವನಾಥ್ ವಂದಿಸಿದರು.