ಮಡಿಕೇರಿ, ಅ. 28: ಐತಿಹಾಸಿಕ ಶ್ರೀ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಗೊಂದಲದ ಬಗ್ಗೆ ನ. 2 ರಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಮರುಪರಿಶೀಲಿಸಿ, ಹಿಂದಿನ ಕಟ್ಟುಪಾಡುಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವಂತೆ, ಕೇರಳ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.ನಗರದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀ ಅಯ್ಯಪ್ಪ ಕ್ಷೇತ್ರ ಸಂರಕ್ಷಣಾ ಸಮಿತಿಯ ನೇತೃತ್ವದೊಂದಿಗೆ ನ. 2 ರಂದು ನಡೆಯಲಿರುವ ಹೋರಾಟಕ್ಕೆ ಮಡಿಕೇರಿ ಕೊಡವ ಸಮಾಜ, ಗೌಡ ಸಮಾಜ, ಎಸ್‍ಎನ್‍ಡಿಪಿ, ಬಜರಂಗದಳ, ಹಿಂದೂ ಮಲೆಯಾಳಿ ಸಮಾಜ, ಮೊಗೆರ ಸಮಾಜ, ದೈವಜ್ಞ ಸಮಾಜ, ವಿಶ್ವಕರ್ಮ ಸಂಘ, ಮಡಿವಾಳ ಸಂಘ ಸಹಿತ ಇತರ ಸಂಘಟನೆಗಳ ಪ್ರಮುಖರು ಬೆಂಬಲ ಘೋಷಿಸಿದರು.ಮಡಿಕೇರಿ ಕೊಡವ ಸಮಾಜದ ಪರವಾಗಿ ಮಾದೇಟಿರ ಬೆಳ್ಯಪ್ಪ, ಇತರ ಸಂಘ ಸಂಸ್ಥೆಗಳ ಪರವಾಗಿ ಟಿ.ಕೆ. ಸುಧೀರ್, ಕೋಡಿ ಚಂದ್ರಶೇಖರ್, ಮೊಗೆರ ರವಿ, ಕೆ.ಎಸ್. ರಮೇಶ್, ವಾಸುದೇವ್, ಮೀನಾಸ್ ಪ್ರವೀಣ್, ರೂಪ ಸುಬ್ಬಯ್ಯ, ಕೆ.ಕೆ. ಹರೀಶ್, ಸುರೇಶ್ ಮುತ್ತಪ್ಪ, ಮನುಕುಮಾರ್ ರೈ ಮೊದಲಾದವರು ಅಭಿಪ್ರಾಯ ನೀಡಿದರು. ದೇವಾಲಯ ಸಂರಕ್ಷಣಾ ಸಮಿತಿ ಪರವಾಗಿ ಟಿ.ಎಸ್. ಪ್ರಕಾಶ್ ಕಾರ್ಯಕ್ರಮದ ರೂಪುರೇಷೆ ನೀಡಿದರು.

ಶ್ರೀ ಕ್ಷೇತ್ರ ಶಬರಿಮಲೆ ಸಂರಕ್ಷಣೆಯ ಸಂಕಲ್ಪದೊಂದಿಗೆ ನ. 2 ರಂದು ಜಿಲ್ಲಾಧಿಕಾರಿ ಕಚೇರಿಯ ತನಕ ಮುತ್ತಪ್ಪ ಸನ್ನಿಧಿಯಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಈ ವೇಳೆ ಕೇವಲ ಅಯ್ಯಪ್ಪ ಸ್ವಾಮಿಯ ಸ್ಮರಣೆ, ಭಜನೆಯಲ್ಲಿ ತೆರಳಲು ನಿರ್ಧರಿಸುವದ ರೊಂದಿಗೆ, ಯಾವದೇ ಘೋಷಣೆ ಕೂಗದಿರಲು ನಿರ್ಣಯಿಸಲಾಯಿತು.

ಹಿರಿಯರಾದ ಗೋಪಿಸ್ವಾಮಿ, ದೊರೆಸ್ವಾಮಿ, ಉನ್ನಿಕೃಷ್ಣನ್ ಸಹಿತ ಅಯ್ಯಪ್ಪ ಭಕ್ತರು, ಮಹಿಳೆಯರು ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು.