ಮಡಿಕೇರಿ, ಅ. 28: 5 ವರ್ಷಗಳ ಹಿಂದೆ ಕೊಡಗಿನ ಗಡಿ ಮುಂಡ್ರೋಟು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ನಕ್ಸಲ್‍ವಾದಿ ರೂಪೇಶ್‍ನನ್ನು ಇಂದು ಮುಸ್ಸಂಜೆ ಕೇರಳ ಪೊಲೀಸರು ಬಿದಿ ಭದ್ರತೆಯಲ್ಲಿ ನಗರಕ್ಕೆ ಕರೆ ತಂದಿದ್ದಾರೆ. ನಕ್ಸಲೀಯ ಅಪರಾಧಗಳೊಂದಿಗೆ ಆಂಧ್ರ ಪೊಲೀಸರಿಂದ ಈ ಹಿಂದೆ ಬಂಧಿಸಲ್ಪಟ್ಟಿರುವ ರೂಪೇಶ್‍ನನ್ನು, ಅನಂತರದಲ್ಲಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದ ರೂಪೇಶ್‍ನನ್ನು ತ್ರಿಶೂರು ಕಾರಾಗೃಹದಲ್ಲಿ ಇರಿಸಲಾಗಿತ್ತು.ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ರೋಟುವಿನಲ್ಲಿ ತನ್ನ ಸಹಚರರೊಂದಿಗೆ 5 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಈತನನ್ನು ತಾ. 29 ರಂದು (ಇಂದು) ವಿಚಾರಣೆಗಾಗಿ

(ಮೊದಲ ಪುಟದಿಂದ) ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಶಸ್ತ್ರಸಜ್ಜಿತ ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಕರೆತರಲಾಗಿದೆ. ಆರೋಪಿಯನ್ನು ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ರಾತ್ರಿ ಇರಿಸುವದರೊಂದಿಗೆ, ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆಯೆಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಕೇರಳ ನಕ್ಸಲ್ ನಿಗ್ರಹ ಕಾರ್ಯಪಡೆ ಸಹಿತ 27 ಮಂದಿ ಶಸ್ತ್ರಸಜ್ಜಿತ ಪೊಲೀಸರು ಆರೋಪಿಯನ್ನು ಬೆಂಗಾವಲಿನಲ್ಲಿ ಕರೆತರಲಾಗಿದೆ.