ಸಿದ್ದಾಪುರ, ಅ. 28: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ, ಸ್ತ್ರೀಶಕ್ತಿ ಸಂಘಗಳ ಸದಸ್ಯರ ಎರಡು ದಿನಗಳ ವಸ್ತು ಮಾರಾಟ ಮೇಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷ ಮಣಿ ಉದ್ಘಾಟಿಸಿದರು. ಸಿದ್ದಾಪುರ ವ್ಯಾಪ್ತಿಯ 25 ಕ್ಕೂ ಅಧಿಕ ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರಲ್ಲದೆ, ತಾವು ತಯಾರಿಸಿದ ತಿಂಡಿ ಪದಾರ್ಥಗಳು ಹಾಗೂ ತರಕಾರಿಗಳನ್ನು ವ್ಯಾಪಾರ ಮಾಡಿದರು. ಕೇರಳ ರಾಜ್ಯದ ತಿಂಡಿ ಪದಾರ್ಥಗಳು ಭರ್ಜರಿಯಾಗಿ ಮಾರಾಟವಾದವು. ಸಂತೆ ದಿನವಾದ ಕಾರಣ ಸಂತೆಗೆ ಬಂದ ಜನರು ಕೂಡ ಮಾರಾಟ ಮಳಿಗೆಗಳಿಗೆ ತೆರಳಿ ಸಾಮಗ್ರಿಗಳನ್ನು ಖರೀದಿಸಿದರು. ಮಾಲ್ದಾರೆ ವ್ಯಾಪ್ತಿಯ ಸ್ತ್ರೀಯರು ತಮ್ಮ ಜಾಗದಲ್ಲಿ ಬೇಸಾಯ ಮಾಡಿದ ಜೋಳ, ಕಬ್ಬು, ಬಾಳೆಹಣ್ಣು, ಮಜ್ಜಿಗೆಯನ್ನು ಮಾರಾಟಕ್ಕಿಟ್ಟರು.
ಹೆಚ್ಚಾಗಿ ಹಳ್ಳಿಯಲ್ಲಿ ಬೆಳೆಸಿದ ನಾಡು ತರಕಾರಿಗಳ ಸೊಪ್ಪು, ಕಾಯಿಗಳು, ಕುಂಬಳ ಕಾಯಿಗಳನ್ನು ಖರೀದಿಸಲು, ಗ್ರಾಹಕರು ಮುಗಿ ಬಿದ್ದರು. ಸಿದ್ದಾಪುರ ಸಮೀಪದ ಅವರೆಗುಂದ ಹಾಡಿಯವರು ನೆಲ್ಲಿಕಾಯಿ ಹಾಗೂ ವಿವಿಧ ತರಕಾರಿಗಳನ್ನು ಮಾರಾಟ ಮಾಡಿದರು. ಪಂಚಾಯಿತಿಯ ಆವರಣದೊಳಗೆ ಮಳಿಗೆ ಹಾಕಿದ ಮಹಿಳೆಯರು, ಅಕ್ಕಿ, ಚಕ್ಕುಲಿ, ಚುರ್ಮುರಿಗಳನ್ನು ತಯಾರಿಸಿ ಮಾರಾಟ ಮಾಡಿದರು.
ಹಳ್ಳಿಗಳಿಂದ ತಂದಿದ್ದ ತರಕಾರಿ ಇನ್ನಿತರ ದೈನಂದಿನ ವಸ್ತುಗಳು ಖಾಲಿಯಾಗಿತ್ತು.
ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಕಾರ ನೀಡಿತ್ತು. ಸ್ತ್ರೀಶಕ್ತಿ ತಾಲೂಕು ಒಕ್ಕೂಟದ ಮುಖ್ಯಸ್ಥೆ ರಜನಿ, ಗುಹ್ಯ ಅಗಸ್ತೇಶ್ವರ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿ ಕೆ.ಬಿ. ಪ್ರಸನ್ನ, ಸಿದ್ದಾಪುರ ಗ್ರಾ.ಪಂ ಸದಸ್ಯರುಗಳು ಹಾಗೂ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.