ಮಡಿಕೇರಿ, ಅ. 28: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಕೂಲಿ ಕಾರ್ಮಿಕರು ಕೂಡ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದು, ಕಾರ್ಮಿಕರು ಮಾಡಿರುವ ಎಲ್ಲಾ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕೆಂದು ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಶಿವದಾಸ್, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಸುನಿಲ್ ಹಾಗೂ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಕಾರ್ಯದರ್ಶಿ ಯೋಗೇಶ್ ಒತ್ತಾಯಿಸಿದ್ದಾರೆ.
ಜಿಲ್ಲೆಯ ಕೂಲಿ ಕಾರ್ಮಿಕರು ಯಾವದೇ ಬ್ಯಾಂಕ್, ಸಹಕಾರ ಸಂಘ ಅಥವಾ ಸಂಘ-ಸಂಸ್ಥೆಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡುವ ಮೂಲಕ ನೊಂದವರ ನೆರವಿಗೆ ಬರಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸುವದಾಗಿ ತಿಳಿಸಿದ್ದಾರೆ. ತೋಟದ ಮಾಲೀಕರು ಅತಿವೃಷ್ಟಿ ಹಾನಿಯಿಂದ ಸಂಕಷ್ಟದಲ್ಲಿರುವದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ರೀತಿಯ ಸನ್ನಿವೇಶದಲ್ಲಿ ಕಾರ್ಮಿಕರ ಸಾಲಮನ್ನಾ ಮಾಡುವದು ಸೂಕ್ತವೆಂದು ಸರಕಾರಕ್ಕೆ ಮನವರಿಕೆ ಮಾಡಿಕೊಡುವದಾಗಿ ಹೇಳಿದ್ದಾರೆ.
94 ಸಿ ಮತ್ತು 94 ಸಿಸಿ ಯಡಿ ಅರ್ಜಿ ಸಲ್ಲಿಸಿದರು ಹಕ್ಕುಪತ್ರ ಸಿಗದೆ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೂ ಸೂಕ್ತ ಪರಿಹಾರ ನೀಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಬಡ ಹೆಣ್ಣು ಮಕ್ಕಳ ವಿವಾಹದ ಬಗ್ಗೆಯೂ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯಬೇಕಾಗಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರಿದ್ದು, ಪ್ರತಿಯೊಬ್ಬರು ನಿತ್ಯ ತಲಾ ಎರಡು ರೂ.ಗಳನ್ನು ಅಭಿವೃದ್ಧಿಗಾಗಿ ಧನ ಸಹಾಯದ ರೂಪದಲ್ಲಿ ನೀಡಿದರೆ ಮೂವತ್ತು ಜಿಲ್ಲೆಗಳಿಗೆ ಪ್ರತಿ ತಿಂಗಳು ರೂ. 12-13 ಕೋಟಿ ಅಭಿವೃದ್ಧಿಗಾಗಿ ವಿನಿಯೋಗಿಸಲು ಸಾಧ್ಯವಾಗುತ್ತದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.