ಮಡಿಕೇರಿ, ಅ.28 : ಎಮ್ಮೆಮಾಡು ಗ್ರಾಮದ ಪಡಿಯಾಣಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸುಮಯ್ಯ ಎಂಬ ಮಹಿಳೆಯ ಸಾವಿನ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಹೊದವಾಡದ ಸಾರ್ವಜನಿಕ ಹಿತರಕ್ಷಣಾ ಸಮಿತಿ ಹಾಗೂ ಹೈದ್ರೂಸ್‍ಜುಮ್ಮಾ ಮಸೀದಿಯ ಪ್ರಮುಖರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಸಮಿತಿಯ ಪ್ರಮುಖ ಬಿ.ಎ.ಸುಲೇಮಾನ್ ಮತ್ತು ಇತರರು, ಅ.23ರ ಬೆಳಿಗ್ಗೆ ಸುಮಯ್ಯ ನೇಣು ಬಿಗಿದ ರೀತಿಯಲ್ಲಿ ಪತಿ ಇಸಾಕ್ ಅವರ ಮನೆಯಲ್ಲಿ ಮೃತಪಟ್ಟಿದ್ದರು. ಆದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅದು ಆತ್ಮಹತ್ಯೆಯಲ್ಲ ಎಂಬ ಸಂಶಯ ಮೂಡಿದೆ ಎಂದು ಆರೋಪಿಸಿದರು. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಸುಮಯ್ಯಳ ಮಕ್ಕಳು ಹಾಗೂ ಕುಟುಂಬ ವರ್ಗಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸುಲೇಮಾನ್ ಒತ್ತಾಯಿಸಿದರು.

ಗ್ರಾ.ಪಂ. ಸದಸ್ಯ ಮಹಮ್ಮದ್ ಶಾಫಿ ಅವರು ಮಾತನಾಡಿ, ಪ್ರಕರಣವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಗ್ರಾಮದ ಕೆಲವು ಪ್ರಭಾವಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಸುಮಯ್ಯಳ ಸಂಶಯಾಸ್ಪದ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸದಿದ್ದಲ್ಲಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವದೆಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೈದ್ರೂಸ್‍ಜುಮ್ಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ಸಿನಾನ್, ಗ್ರಾ.ಪಂ. ಸದಸ್ಯ ಹೆಚ್.ಎ.ಹಂಸ ಹಾಗೂ ಸುಮಯ್ಯಳ ಅಣ್ಣ ಎಂ.ಎ.ಹಮೀದ್ ಉಪಸ್ಥಿತರಿದ್ದರು.