ಸುಂಟಿಕೊಪ್ಪ, ಅ. 28: ಕಾರ್ಮಿಕರೇ ಅಧಿಕವಾಗಿರುವ ಸುಂಟಿಕೊಪ್ಪ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಶುಶ್ರೂಷಕಿಯರ ಕೊರತೆಯಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಪರದಾಡುವಂತಾಗಿದೆ ಎಂದು ನೊಂದವರು ತಿಳಿಸಿದ್ದಾರೆ.
ಸುಂಟಿಕೊಪ್ಪ ಸರಕಾರಿ ಆಸ್ಪತ್ರೆಯಲ್ಲಿ ಒಬ್ಬರು ಪುರುಷ ಆಯುಷ್ ಹಾಗೂ ಮಹಿಳಾ ವೈದ್ಯರಿದ್ದಾರೆ ಶುಶ್ರೂಷಿಕಿಯರ ಹುದ್ದೆಯೂ ಖಾಲಿ ಇದೆ. ದಿನಕ್ಕೆ ಸರಾಸರಿ ನೂರು ಮಂದಿ ಹೊರರೋಗಿಗಳು 3 ರಿಂದ 5 ಮಂದಿ ಒಳ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ.
ಕಾಫಿ ತೋಟವನ್ನು ಅವಲಂಬಿತಗೊಂಡಿರುವ ಸುಂಟಿಕೊಪ್ಪದಲ್ಲಿ ಈ ಆಸ್ಪತ್ತೆಗೆ ಬಡ ಕೂಲಿ ಕಾರ್ಮಿಕರು ಅಧಿಕ ಮಂದಿ ಚಿಕಿತ್ಸೆಗೆ ಬರುತ್ತಾರೆ. ಅವಘಡ ಸಂಭವಿಸಿ ಸಾವನ್ನಪ್ಪಿದರೆ ಆತ್ಮಹತ್ಯೆ ಮಾಡಿಕೊಂಡರೆ ಮರಣೋತ್ತರ ಪರೀಕ್ಷೆ ನಡೆಸಲು ನುರಿತ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಸುತ್ತ ಮುತ್ತಲಿನ ಗ್ರಾಮಸ್ಥರು ಕುಶಾಲನಗರ ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಂತಹ ಬಡಕೂಲಿ ಕಾರ್ಮಿಕರು ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನು ವಿನಿಯೋಗಿಸುವಂತಾಗಿದೆ. ರಾತ್ರಿ ವೇಳೆ ವೈದ್ಯರ ಅಲಭ್ಯತೆಯಿಂದ ರೋಗಿಗಳು ಪರದಾಡುವದು ಸಾಮಾನ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ನಲುಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಬೇಕು. ಹಗಲು ವೇಳೆ ಶುಶ್ರೂಷಕಿಯೊಬ್ಬರೇ ಜೌಷಧಿ ಹಾಗೂ ಚುಚ್ಚುಮದ್ದು ನೀಡಬೇಕಾಗುತ್ತದೆ. ನಿತ್ಯವು ರೋಗಿಗಳ ಸಂಖ್ಯೆ ಹೆಚ್ಚಾದಾಗ ಈ ಕೆಲಸ ಮಾಡಲು ಅವರಿಗೆ ತ್ರಾಸದಾಯಕವಾಗುತ್ತದೆ. ಆದುದರಿಂದ ಪ್ರತಿದಿನ ಇಬ್ಬರು ಶುಶ್ರೂಷಕಿಯರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಎಂದೂ ರೋಗಿಗಳು ಆಗ್ರಹಿಸಿದ್ದಾರೆ.
ಮೇಲ್ದರ್ಜೆಗೆ ಏರಿಕೆ: ಸುಂಟಿಕೊಪ್ಪ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಜನಪ್ರತಿನಿಧಿಗಳು, ಜಿ.ಪಂ. ಸದಸ್ಯರುಗಳು ಸರಕಾರದ ಮೇಲೆ ಒತ್ತಡ ತರುತ್ತಲೇ ಇದ್ದಾರೆ. ಆಯಾ ಸರಕಾರದ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸುತ್ತಾ ಹಲವಾರು ವರ್ಷ ಕಳೆದರೂ ಅತೀ ಮುಖ್ಯವಾದ ಬೇಡಿಕೆ ಈಡೇರಲೇ ಇಲ್ಲ. ಜನ ಸಂಖ್ಯೆ ಕಡಿಮೆ ಇದೆ ಜಿಲ್ಲಾಸ್ಪತ್ರೆ ಹಾಗೂ ಸಮುದಾಯ ಕೇಂದ್ರದ ಅಂತರದ ಕುಂಟು ನೆಪದಿಂದ ಈ ವಿಭಾಗದ ಜನರ ಬೇಡಿಕೆಗೆ ಸ್ಪಂದನೆ ಸಿಗಲೇ ಇಲ್ಲ.
ಈಗ ಕರ್ತವ್ಯದಲ್ಲಿರುವ ವೈದ್ಯರುಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದರೂ ಇನ್ನೊಬ್ಬರ ಅವಶ್ಯಕತೆ ರಾತ್ರಿ ಪಾಳಿಯ ವೈದ್ಯರ ನೇಮಕವಾಗಬೇಕು. ಕೂಡಲೇ ಮರಣೋತ್ತರ ಪರೀಕ್ಷೆ ನಡೆಸುವ ಸಿಬ್ಬಂದಿ ವೈದ್ಯರನ್ನು ನೇಮಕಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.