ಮಡಿಕೇರಿ, ಅ. 28: ಎಂಟು ದಶಕಗಳಿಂದ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಬಂದು ಹೋಗುವ ಪ್ರಯಾಣಿಕರ ಸಹಿತ ಖಾಸಗಿ ಬಸ್ ನಿಲುಗಡೆಗೆ ಆಸರೆಯಾಗಿದ್ದ ಇಲ್ಲಿನ ಧರಾಸಾಯಿ ಕಟ್ಟಡದಿಂದಲೂ ನಗರಸಭೆಗೆ ಆದಾಯ ಲಭಿಸುವಂತಾಗಿದೆ. ಮೇಲ್ನೋಟಕ್ಕೆ ಶಿಥಿಲಗೊಂಡಂತೆ ಬಾಸವಾಗುತ್ತಿದ್ದ ಹಳೆಯ ಬಸ್ ನಿಲ್ದಾಣದ ಕಟ್ಟಡವನ್ನು ಇದೀಗ ನೆಲಸಮಗೊಳಿಸಲಾಗುತ್ತಿದೆ.
ಆಗಸ್ಟ್ನಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ಈ ನಿಲ್ದಾಣದ ಕಟ್ಟಡಕ್ಕೆ ಹೊಂದಿಕೊಂಡಿರುವ ಹಿಂಬದಿ ಬೆಟ್ಟ ಕುಸಿತದೊಂದಿಗೆ ಅಪಾಯ ಎದುರಾಗಿತ್ತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ನಗರಸಭೆ ಈ ಕಟ್ಟಡ ಕೆಡವಲು ಮುಂದಾಗಿದೆ. ಅಲ್ಲದೆ ಖಾಸಗಿ ಬಸ್ಗಳನ್ನು ವೆಬ್ಸ್ ಬಳಿಯ ನೂತನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವೆ ಕೆಡವಲ್ಪಡುತ್ತಿರುವ ಹಳೆಯ ಕಟ್ಟಡದಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣವು ಕಾಂಕ್ರೀಟ್ನೊಂದಿಗೆ ಗೋಚರಿಸಿದೆ. ನಗರಸಭೆ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಟಿ. ಉನ್ನಿಕೃಷ್ಣನ್ ಹೇಳುವಂತೆ ಈ ಕಬ್ಬಿಣದ ಅವಶೇಷಗಳನ್ನು ಸುಖಾಸುಮ್ಮನೆ ಯಾರ್ಯಾರೋ ಒಯ್ಯುವ ಬದಲಿಗೆ, ಗುತ್ತಿಗೆದಾರರ ಮುಖಾಂತರ ಕಾಂಕ್ರೀಟ್ನಿಂದ ಬೇರ್ಪಡಿಸಲಾಗುತ್ತಿದೆ. ಈ ಕಬ್ಬಿಣದ ಬಾಬ್ತು ನಗರಸಭೆಗೆ ರೂ. 40 ಸಾವಿರ ಆದಾಯ ದೊರಕುವಂತಾಗಿದೆ. ಒಂದೆಡೆ ಐತಿಹಾಸಿಕ ಕಟ್ಟಡವೊಂದು ಅಳಿಯುವದರೊಂದಿಗೆ ಆ ಮೂಲಕವೂ ನಗರಸಭೆಗೆ ಆದಾಯ ಲಭಿಸುವಂತಾಗಿದೆ. ‘ಇಲ್ಲಿ ಆನೆ ಬದುಕಿದರೂ ಲಕ್ಷ, ಸತ್ತರೂ ಲಕ್ಷ’ ಎಂಬಂತೆ ಹಿರಿಯರ ಮಾತಿನಂತೆ ಧರಾಶಾಯಿ ಕಟ್ಟಡ ಈ ಮುಖಾಂತರ ಆದಾಯಕ್ಕೆ ದಾರಿ ಕಲ್ಪಿಸಿದೆ.
ಒಂದು ಕೋಟಿಯ ಸಂಕೀರ್ಣ: ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಕಾರ ಹಳೆಯ ಕಟ್ಟಡ ತೆರವುಗೊಳಿಸಿ, ಅದೇ ಸ್ಥಳದಲ್ಲಿ ರೂ. 1 ಕೋಟಿ ಮೊತ್ತದಲ್ಲಿ ತೃತೀಯ ನಗರೋತ್ಥಾನ ನಿಧಿಯಿಂದ ನೂತನ ವಾಣಿಜ್ಯ ಸಂಕೀರ್ಣಕ್ಕೆ ಯೋಜನೆ ರೂಪುಗೊಂಡಿದೆ. ಆ ಬೆನ್ನಲ್ಲೇ ಆಕಸ್ಮಿಕ ಎದುರಾಗಿರುವ ಭೂಕುಸಿತದಿಂದ ಇಲ್ಲಿ ತಡೆಗೋಡೆ ನಿರ್ಮಿಸುವದು ಅನಿವಾರ್ಯವಾಗಿದ್ದು, ಆ ಕಾಮಗಾರಿ ಬಾಬ್ತು ಜಿಲ್ಲಾಧಿಕಾರಿಗಳು ಮಳೆಪರಿಹಾರ ನಿಧಿ ರೂ. 1 ಕೋಟಿ ಕಲ್ಪಿಸಿದ್ದಾರೆ. ಆ ಹಣದಿಂದ ತಡೆಗೋಡೆ ಕೂಡ ನಿರ್ಮಾಣಗೊಳ್ಳಲಿದೆ.