ಒಡೆಯನಪುರ, ಅ. 28: ಒಡೆಯನಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಚುಚ್ಚುಮದ್ದು ನೀಡುವ ಸಲುವಾಗಿ ಇಂದ್ರ ಧನುಷ್ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಕುರಿತು ಅಂಗನವಾಡಿ ಶಿಕ್ಷಕಿ ಎಸ್.ಎಲ್. ಧನ್ಯ ಮಾಹಿತಿ ನೀಡಿದರು. ಇಂದ್ರ ಧನುಷ್ ಕಾರ್ಯಕ್ರಮದಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ತಮ್ಮ ಆರೋಗ್ಯ ಕಾಪಾಡುವ ಕುರಿತು ಮಾಹಿತಿ ನೀಡಲಾಗುತ್ತದೆ. ಗರ್ಭಿಣಿ -ಬಾಣಂತಿಯರು ಪೌಷ್ಟಿಕಾಂಶ ಒಳಗೊಂಡಿರುವ ಆಹಾರವನ್ನು ಸೇವಿಸಬೇಕು. ವಿವಿಧ ಸೊಪ್ಪು, ಮೊಳಕೆಕಾಳು, ಹಣ್ಣು-ಹಂಪಲು, ಹಸಿ ತರಕಾರಿ ಮುಂತಾದ ಆಹಾರಗಳನ್ನು ಸೇವಿಸುವ ಮೂಲಕ ಆರೋಗ್ಯವಂತರಾಗುವಂತೆ ಸಲಹೆ ನೀಡಿದರು.

ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಿ. ಪ್ರೇಮಾವತಿ, ಆಶಾ ಕಾರ್ಯಕರ್ತೆ ರಾಣಿ, ಸುಧಾಮಣಿ, ಅಂಗನವಾಡಿ ಸಮನ್ವಯ ಸಮಿತಿ ಅಧ್ಯಕ್ಷೆ ರಚಿತ, ನಿಡ್ತ ಗ್ರಾ.ಪಂ. ಸದಸ್ಯೆ ಸಾವಿತ್ರಮ್ಮ, ಸ್ತ್ರೀಶಕ್ತಿ ಸಂಘದ ಸೇವಾ ಪ್ರತಿನಿಧಿ ನಾಗವೇಣಿ ಯೋಗೇಂದ್ರ, ವಿ.ಡಿ. ಭಾಗ್ಯ ರಮೇಶ್ ಮುಂತಾದವರು ಹಾಜರಿದ್ದರು.