ನಾಪೋಕ್ಲು, ಅ. 28: ಎನ್‍ಎಸ್‍ಎಸ್ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸೇವಾ ಮನೋಭಾವ, ಸಹಜೀವನ, ಮುಂತಾದ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಾಫಿ ಬೆಳೆಗಾರ ಮಣವಟ್ಟೀರ ದಯ ಚಿಣ್ಣಪ್ಪ ಹೇಳಿದರು. ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದೊಡ್ಡಪುಲಿಕೋಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮಡಿಕೇರಿ ಆರ್.ಎಂ.ಸಿ. ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮಾತನಾಡಿ, ಎನ್‍ಎಸ್‍ಎಸ್‍ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾಫಿ ಬೆಳೆಗಾರ ಕರವಂಡ ಲವ ನಾಣಯ್ಯ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಮೂಡುವ ಸೇವಾ ಮನೋಭಾವನೆ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು. ಅರುಣ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿ ದಾಯನ ಎಸ್. ಶಿವಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕಿ ಪ್ರೇಮಾ ಹಾಗೂ ಸಹಶಿಕ್ಷಕಿ ಸುಗುಣ ಅವರನ್ನು ಸನ್ಮಾನಿಸಲಾಯಿತು. ಅರುಣ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಮಕೃಷ್ಣ, ಕಾಫಿ ಬೆಳೆಗಾರ ಚೋಕಿರ ಭೀಮಯ್ಯ, ನೆರವಂಡ ಉಮೇಶ್, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ ಹರೀಶ್, ಕೋಟೆರ ನಂದಿನಿ, ಮತ್ತಿತರರು ಪಾಲ್ಗೊಂಡಿದ್ದರು. ಶಿಬಿರಾಧಿಕಾರಿ ಕೆ.ಆರ್. ರಮೇಶ್ ಸಹಶಿಬಿರಾಧಿಕಾರಿ ಪಿ.ಎನ್. ರೋಹಿತ್, ಬಿ.ಎನ್. ಹೇಮಾವತಿ, ಗಣೇಶ್, ಜಸ್ಮಿ, ಉಪಸ್ಥಿತರಿದ್ದರು.