ಮಡಿಕೇರಿ, ಅ. 28: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದÀಲ್ಲಿ ದಲಿತರಿಗಾಗಿ ಮಂಜೂರಾಗಿರುವ ಸ್ಮಶಾನದ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲು ಮುಂದಾಗಿರುವ ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡು ಸ್ಮಶಾನದ ದಾಖಲೆಗಳನ್ನು ದುರಸ್ತಿಪಡಿಸಿಕೊಡದಿದ್ದಲ್ಲಿ ಸೋಮವಾರದ ಬಳಿಕ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ಕೆ. ಮೊಣ್ಣಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲೇಮಾಡು ಕಾನ್ಶಿರಾಂ ನಗರದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ಮೇಲ್ಜಾತಿ ಬಡವರು ಸೇರಿದಂತೆ ಸುಮಾರು 300 ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. ಈ ಕುಟುಂಬಗಳಿಗೆ ಶವ ಸಂಸ್ಕಾರ ಮಾಡಲು 2009-10 ರಲ್ಲಿ ಅಂದಿನ ಜಿಲ್ಲಾಡಳಿತ 4 ಏಕರೆ ಜಾಗವನ್ನು ಮಂಜೂರು ಮಾಡಿದ್ದು, ಇದರಲ್ಲಿ ಪರಿಶಿಷ್ಟ ಜಾತಿಯವರ ಶವ ಸಂಸ್ಕಾರಕ್ಕೆ 2 ಏಕರೆ ಜಾಗವನ್ನು ಕಾಯ್ದಿರಿಸಿ ದಾಖಲೆ ಪತ್ರಗಳನ್ನು ನೀಡಿದ್ದಾರೆ. ಆದರೆ, ಇದನ್ನು ದುರಸ್ತಿ ಪಡಿಸಲು ಆಗಿನ ತಹಶೀಲ್ದಾರರು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಶಾನ ಜಾಗಕ್ಕೆ ಮಂಜೂರಾಗಿ ಎಲ್ಲಾ ದಾಖಲೆಗಳು ಮತ್ತು ನೂರಾರು ಗೋರಿಗಳು ಇರುವ ಈ ಜಾಗವನ್ನು 2016 ರಲ್ಲಿ ಕಂದಾಯ ಪರಿವೀಕ್ಷಕರು ಹಾಗೂ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮಂಜೂರು ಮಾಡಿದ್ದಾರೆ.
ಕ್ರಿಕೆಟ್ ಸಂಸ್ಥೆಗೆ ಸ್ಮಶಾನದ ಜಾಗವನ್ನು ಸೇರಿಸಿಕೊಂಡು ಒಟ್ಟು 12.70 ಏಕರೆ ಜಾಗವನನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದು, ದಲಿತ ನಾಯಕರುಗಳ ಮೇಲೆ ಸುಳ್ಳು ಕೇಸ್ ದಾಖಲಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಎನ್. ಸುರೇಶ್, ಸಿದ್ದು, ಪಿ.ಸಿ. ಸುರೇಶ್ ಹಾಗೂ ಗೋವಿಂದ ಉಪಸ್ಥಿತÀರಿದ್ದರು.