ಮಡಿಕೇರಿ, ಅ. 28: ‘ಸರ್ ರಾಜಾಸೀಟ್ ಬಳಿ, ತೋಟಗಾರಿಕಾ ಇಲಾಖೆಗೆ ಸೇರಿದ ಕೆರೆಗೆ ಹಸು ಬಿದ್ದಿದೆ; ಒದ್ದಾಡುತ್ತಿದೆ’ ಎಂದು ‘ಶಕ್ತಿ’ಯ ಸಿಬ್ಬಂದಿ ಕಾರ್ತಿಕ್ 4.45ಕ್ಕೆ ದೂರವಾಣಿ ಕರೆ ಮಾಡಿದರು.

ಇಲಾಖೆಗೆ ಸೇರಿದ ದೊಡ್ಡ ಕೆರೆಯಿದೆ. ತಡೆಗೋಡೆ ಇಲ್ಲ, ಬೇಲಿ ಇಲ್ಲ, ಕಾವಲುಗಾರರಿಲ್ಲ-ಮೇಯಲು ಹೋದ ಹಸು ನೀರಿಗೆ ಬಿದ್ದಿದೆ. ಆಳವಾದ ಕೆರೆ ಅತ್ತಿಂದಿತ್ತ ಈಜಾಡುತ್ತಾ, ನೀರು ಕುಡಿದು, ದಣಿದು ಮುಳುಗುವದು-ಆಸರೆಗಾಗಿ ಪರದಾಡುತ್ತಿದ್ದ ಹಸುವಿನ ದಯನೀಯ ದೃಶ್ಯ ಕರುಣಾಜನಕವಾಗಿತ್ತು.

ಕೂಡಲೇ ನಗರ ಠಾಣಾ ಎಸ್‍ಐ ಅನೂಪ್ ಮಾದಪ್ಪ, ಅಗ್ನಿಶಾಮಕ ದಳ, ಮಹೇಶ್ ಜೈನಿಗೆ ತಿಳಿಸಿದೆವು. ಒಂದೆರಡು ವಾಟ್ಸ್‍ಪ್ ತಂಡಕ್ಕೂ ನೆರವಿಗೆ ಬರಲು ಹೇಳಲಾಯಿತು.

ಎಲ್ಲರೂ ಬಂದರು. ಕೆಲವು ಸಾರ್ವಜನಿಕರು ಕೈಜೋಡಿಸಿದರು. ಆಟೋ ಚಾಲಕರೊಬ್ಬರು ನೀರಿಗೆ ಇಳಿಯಲು ತಯಾರಿದ್ದರು. ಸಂದೇಶ ನೋಡಿದ ನಗರಸಭಾ ಸದಸ್ಯೆ ಸಂಗೀತಾ ಪ್ರಸನ್ನ-ಪತಿ ಪ್ರಸನ್ನ ಮತ್ತು ತಂಡದವರೊಂದಿಗೆ ಹಗ್ಗ-ಗುದ್ದಲಿ ಹಿಡಿದು ಬಂದರು. ಲೈಬ್ರೆರಿಯಲ್ಲಿದ್ದ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಓಡಿ ಬಂದರು.

5.45ಕ್ಕೆ ಹಸುವನ್ನು ಯಶಸ್ವಿಯಾಗಿ ಎತ್ತಲಾಯಿತು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿ.ಕೆ. ಸೋಮಣ್ಣ, ಚೀಯಣ್ಣ, ಜಯಪ್ರಕಾಶ್, ಬಸವರಾಜು ಇದ್ದರು. ಪೊಲೀಸ್ ಇಲಾಖೆಯಿಂದ ಮುತ್ತಣ್ಣ ಮತ್ತು ಮೋಹನ್ ಕುಮಾರ್, ‘ಶಕ್ತಿ’ಯ ಕಾರ್ಯಪ್ಪ, ಕಾರ್ತಿಕ್, ಜಾನಪದ ಪರಿಷತ್ ಸದಸ್ಯರು ಇದ್ದರು.

‘ನಾನೇ ಇವರಿಗೆಲ್ಲ ಫೋನ್ ಮಾಡಿದ್ದು’ ಎಂದು ಸ್ಥಳಕ್ಕೆ ಬಂದ ಕೆ.ಎಂ. ದೇವಯ್ಯ ಎಂಬವರು ಹೇಳಿದರು.

ಇಲ್ಲಿ ಎರಡು ಅಂಶ ಗಮನಿಸು ವಂತಹದು ಮತ್ತು ಸರಿಪಡಿಸ ಬೇಕಾದುದಿದೆ. ತೋಟಗಾರಿಕಾ ಇಲಾಖೆ ಕೆರೆಗೆ ಬೇಲಿ ಹಾಕಲು ಹಲವರು ಹೇಳಿದ್ದರೂ ಕ್ರಮಕೈಗೊಂಡಿಲ್ಲ. ಈಗಾಗಲೇ ಅಲ್ಲಿ ಮುಳುಗುತ್ತಿದ್ದ 8-9 ಹಸುಗಳನ್ನು ಎತ್ತಿದ್ದೇವೆ, ಬೇಲಿ ಹಾಕಲು ಹೇಳಿದ್ದೇವೆ ಎಂದು ಸಿ.ಕೆ. ಸೋಮಣ್ಣ ಹೇಳಿದರು. ಮತ್ತೊಂದು ಮುಖ್ಯವಾದ ಅಂಶ ಎಂದರೆ ಪೊಲೀಸ್ ಇಲಾಖೆ-ಅಗ್ನಿಶಾಮಕ ದಳದ ಸಿಬ್ಬಂದಿ ನೀರಿಗೆ ಬಿದ್ದ ಹಸು ರಕ್ಷಣೆಗೆ ಬಂದಿದ್ದಾರೆ. ಆದರೆ ಅವರಲ್ಲಿ ಈಜು ಬಲ್ಲವರು ಯಾರೂ ಇಲ್ಲ! ಇಂತಹ ಪರಿಸ್ಥಿತಿ ನಿಭಾಯಿಸಲು ತಕ್ಕ ತಯಾರಿ ಇಲಾಖೆಗಳು ಮಾಡಿಕೊಳ್ಳದಿರುವದು ದೌರ್ಭಾಗ್ಯ. ಇಲಾಖಾ ಅಧಿಕಾರಿಗಳು, ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು. ಸಾಕು ಪ್ರಾಣಿಗಳನ್ನು ಬೀದಿಯಲ್ಲಿ ಬಿಡುವ ಮಾಲೀಕರುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.

-ಅನಂತ್