ಮಡಿಕೇರಿ, ಅ.28 : ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಪಾವಿತ್ರ್ಯತೆಯ ಉಳಿವಿಗಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸಂರಕ್ಷಣಾ ಸಮಿತಿ ವತಿಯಿಂದ ನ.2ರಂದು ನಗರದಲ್ಲಿ ನಡೆಯುವ ಸಾಂಕೇತಿಕ ಪ್ರತಿಭಟನಾ ಮೆರವಣಿಗೆಗೆ ಮಡಿಕೇರಿಯ ಶ್ರೀಅಯ್ಯಪ್ಪ ದೀಪಾರಾಧನಾ ಸಮಿತಿ ಬೆಂಬಲ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರು, ಶಬರಿಮಲೆ ಕ್ಷೇತ್ರ ಹಲವು ಶತಮಾನಗಳಿಂದ ತನ್ನದೇ ಆದ ಕಟ್ಟುಪಾಡುಗಳೊಂದಿಗೆ ಪಾವಿತ್ರ್ಯತೆಯನ್ನು ಕಾಯ್ದುಕೊಂಡು ಬಂದಿದ್ದು, ಇದೀಗ ಕೆಲವರ ಪಿತೂರಿ ಹಾಗೂ ಷಡ್ಯಂತ್ರದಿಂದ ಕ್ಷೇತ್ರದ ಆಚಾರ, ವಿಚಾರಗಳಿಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಕೇವಲ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಸದ್ಭಕ್ತರ ನಂಬಿಕೆ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವಲ್ಲ. ಬದಲಾಗಿ ಹಲವಾರು ವರ್ಷಗಳಿಂದ ಹಿಂದೂ ಧಾರ್ಮಿಕ ಕೇಂದ್ರಗಳು, ಶ್ರದ್ಧಾ ಬಿಂದುಗಳ ಮೇಲೆ ವಿದೇಶಿ ಹಸ್ತಕರ ಪಿತೂರಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಈ ಸಂಚಿನ ಭಾಗವೇ ಶಬರಿಮಲೆ ಪ್ರಕರಣ ಎಂದು ಆರೋಪಿಸಿದರು.
ಹೆಣ್ಣು ಮಕ್ಕಳನ್ನು ಅತ್ಯಂತ ಪೂಜನೀಯ ಹಾಗೂ ಶ್ರದ್ಧಾ ಭಾವನೆಯಿಂದ ಹಿಂದೂ ಸಮಾಜ ಕಾಣುತ್ತಿದೆ. ಶಬರಿಮಲೆ ಕ್ಷೇತ್ರದ ಬಗೆಗಿನ ನಮ್ಮ ಶ್ರದ್ಧೆ, ಆಚಾರ, ವಿಚಾರ, ಭಕ್ತಿ, ಭಾವನೆಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದೇ ಹೊರತು ಅದನ್ನು ಬೇರೆಯವರು ಪ್ರಶ್ನಿಸುವಂತಿಲ್ಲ ಎಂದು ಹೇಳಿದರು.
ಶಬರಿಮಲೆ ಕ್ಷೇತ್ರಕ್ಕೆ ಸಂಬಂಧಿಸಿದ ತೀರ್ಪನ್ನು ಮರು ಪರಿಶೀಲನೆಗೆ ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಈ ಸಂದರ್ಭ ಕ್ಷೇತ್ರದ ಪಾವಿತ್ರ್ಯತೆ ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ನ.2 ರಂದು ನಡೆಯುವ ಜನ ಜಾಗೃತಿ ಮೆರವಣಿಗೆಯಲ್ಲಿ ಸಮಿತಿ ಪಾಲ್ಗೊಳ್ಳಲಿದೆ ಎಂದು ಪ್ರಮುಖರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಚಿ.ನಾ.ಸೊಮೇಶ್, ಗೋಪಿಸ್ವಾಮಿ, ದೊರೆಸ್ವಾಮಿ, ವಿಜಯನ್ ಹಾಗೂ ಹರೀಶ್ ಉಪಸ್ಥಿತರಿದ್ದರು.