ಒಡೆಯನಪುರ, ಅ. 29 : ಸಮಿಪದ ಹೊಸೂರು ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್‍ಟೆಲ್ ನೆಟ್‍ವರ್ಕ್ ಸೇವೆಯನ್ನು ಅಳವಡಿಸಲಾಗಿದ್ದರೂ ಸಹ ಮೊಬೈಲ್ ಗ್ರಾಹಕರಿಗೆ ದೂರವಾಣಿ ಸೇವೆ ಸರಿಯಾಗಿ ಸಿಗುತ್ತಿಲ್ಲ ಎಂದು ಮೊಬೈಲ್ ಗ್ರಾಹಕರು ದೂರಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಹೊಸೂರು ಗ್ರಾ.ಪಂ. ಸದಸ್ಯ ಎಚ್.ಎಸ್. ಪುಟ್ಟಸ್ವಾಮಿಗೌಡ ಮತ್ತು ಮೊಬೈಲ್ ಗ್ರಾಹಕ ಎಚ್.ಕೆ.ರಮೇಶ್ ಅವರುಗಳು ಹೊಸೂರು ಗ್ರಾಮದಲ್ಲಿ ಗ್ರಾಹಕರ ಸೇವೆಗಾಗಿ ಬಿಎಸ್‍ಎನ್‍ಎಲ್ ಹಾಗೂ ಏರ್‍ಟೆಲ್ ನೆಟ್‍ವರ್ಕ್ ಸೌಲಭ್ಯವನ್ನು ಅಳವಡಿಸಲಾಗಿದೆ. ಹೊಸೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾವಿರಾರು ಮೊಬೈಲ್ ಗ್ರಾಹಕರಿದ್ದಾರೆ.

ಈ ಎಲ್ಲಾ ಮೊಬೈಲ್ ಗ್ರಾಹಕರ ದೂರವಾಣಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹೊಸೂರಿನಲ್ಲಿ ಬಿಎಸ್‍ಎನ್‍ಎಲ್ ಮತ್ತು ಏರ್‍ಟೆಲ್ ನೆಟ್‍ವರ್ಕ್ ಅನ್ನು ಅಳವಡಿಸಲಾಗಿದೆ. ಆದರೆ ನೆಟ್‍ವರ್ಕ್ ಅಳವಡಿಸಲಾಗಿದ್ದರೂ ಮೊಬೈಲ್ ಗ್ರಾಹಕರಿಗೆ ದೂರವಾಣಿ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ, ಬಿಎಸ್‍ಎನ್‍ಎಲ್ ಮತ್ತು ಏರ್‍ಟೆಲ್ ಮೊಬೈಲ್ ಗ್ರಾಹಕರುಗಳು ಸೇವೆಯಿಂದ ವಂಚಿತರಾಗುತ್ತಿದ್ದಾರೆ.

ದೂರು ನೀಡಿದ್ದರೂ ಪ್ರಯೋಜನವಾಗುತ್ತಿಲ್ಲ, ಇದರಿಂದ ಸಾವಿರಾರು ಮೊಬೈಲ್ ಗ್ರಾಹಕರಿಗೆ ತೊಂದರೆಯಾಗುತ್ತಿದೆ, ಈ ನಿಟ್ಟಿನಲ್ಲಿ 15 ದಿನದ ಒಳಗೆ ಬಿಎಸ್‍ಎನ್‍ಎಲ್ ಮತ್ತು ಏರ್‍ಟೆಲ್ ಮೊಬೈಲ್ ಸಂಸ್ಥೆಯ ಅಧಿಕಾರಿಗಳು ನೆಟ್‍ವರ್ಕ್ ಸಮಸ್ಯೆಯನ್ನು ಸರಿಪಡಿಸಲು ಕ್ರಮಕೈಗೊಳ್ಳದಿದ್ದಲ್ಲಿ ಗ್ರಾಹಕರೆಲ್ಲರೂ ಸೇರಿ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಎಚ್ಚರಿಸಿದ್ದಾರೆ.